ಮಂಡ್ಯ :- ಹಾಸನದಲ್ಲಿ ಇತ್ತಿಚೆಗೆ ಕಾಂಗ್ರೆಸ್ ನಡೆಸಿದ್ದ ಜನಕಲ್ಯಾಣ ಸಮಾವೇಶಕ್ಕೆ ಕೌಂಟರ್ ಕೊಡಲು ಜೆಡಿಎಸ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಅಭಿನಂದನೆ ಹೆಸರಿನಲ್ಲಿ ಬೃಹತ್ ಸಮಾವೇಶ ಮಾಡಲು ಮುಂದಾಗಿತ್ತು. ಆದರೆ, ಇದೇ ಡಿಸೆಂಬರ್ 15ರಂದು ಮಂಡ್ಯದಲ್ಲಿ ನಡೆಯಬೇಕಿದ್ದ ಬೃಹತ್ ಸಮಾವೇಶವನ್ನು ಮುಂದೂಡಿಕೆಯಾಗಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜೆಡಿಎಸ್ ಸಮಾವೇಶ ಮುಂಡೂಡಿಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ “ಅಪಾಯವಿದೆ ಎಚ್ಚರಿಕೆ”! ನಾಯಕನಾಗಿ “ಅಣ್ಣಯ್ಯ”
ಮದ್ದೂರು ಪಟ್ಟಣದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 15ರಂದು ಕುಮಾರಸ್ವಾಮಿ ಅಭಿನಂದನಾ ಸಮಾರಂಭ ಮುಂದೂಡಿಕೆ ಮಾಡಲಾಗಿದೆ. ಕುಮಾರಸ್ವಾಮಿಯವರ ಸೂಚನೆ ಮೇರೆಗೆ ಮುಂದೂಡಿದ್ದೇವೆ. ಸಮಾರಂಭ ಮುಂದೂಡಿಕೆಗೆ ಬೇರೆ ಯಾವುದೇ ಕಾರಣ ಇಲ್ಲ. ಯಾವುದೇ ಗೊಂದಲ ಆಗಬಾರದೆಂದು ಮುಂದೂಡಿದ್ದೇವೆ. ಸಮ್ಮೇಳನ ಮುಗಿದ ಮೇಲೆ ದಿನಾಂಕ ನಿಗದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಾಹಿತ್ಯ ಸಮ್ಮೇಳನದ ಸಭೆಗಳಲ್ಲಿ ಕುಮಾರಸ್ವಾಮಿ ಭಾಗವಹಿಸದಿರುವ ಬಗ್ಗೆ ಮಾತನಾಡಿದ ಪುಟ್ಟರಾಜು, ನಾವೆಲ್ಲ ಸಭೆಗಳಲ್ಲಿ ಭಾಗವಹಿಸಿದ್ದೇವೆ. ಕೇಂದ್ರ ಮಂತ್ರಿಗಳು ಬರಲು ಸಾಧ್ಯವಾಗಿಲ್ಲ. ಸಂಸತ್ ಅಧಿವೇಶನ ಇರುವ ಹಿನ್ನೆಲೆಯಲ್ಲಿ ಭಾಗವಹಿಸಿಲ್ಲ. ಜಿಲ್ಲಾಡಳಿತ ಕರೆದಿದ್ದಾರೆ ನಾವು ಹೋಗಿದ್ದೇವೆ. ನಮಗೆ ವಹಿಸಿರುವ ಜವಾಬ್ದಾರಿ ಮಾಡುತ್ತಿದ್ದೇವೆ. ನಾವು ನಾಡುನುಡಿಯ ಕೆಲಸ ಮಾಡಿದ್ದೇವೆ. ಸಾಹಿತ್ಯ ಸಮ್ಮೇಳನ ಚೆನ್ನಾಗಿ ಮಾಡಲಿ. 1.30 ಕ್ಕೆ ಬರಲು ಹೇಳಿ 4 ಗಂಟೆಗೆ ಬರುತ್ತಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಚಲುವರಾಯಸ್ವಾಮಿಗೆ ಟಾಂಗ್ ಕೊಟ್ಟರು.
ಜೆಡಿಎಸ್ ಕಾರ್ಯಕ್ರಮದ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯದ ಬಗ್ಗೆ ಪ್ರತಿಕ್ರಿಯಿಸಿದ ಪುಟ್ಟರಾಜು, ಇಂತಹ ಜಿಲ್ಲಾ ಮಂತ್ರಿಗಳನ್ನ ಬಹಳ ನೋಡಿದ್ದೇವೆ. ಚಲುವರಾಯಸ್ವಾಮಿ ಚುನಾವಣೆಯಲ್ಲಿ ಸೋತಿಲ್ವಾ? ಸಮ್ಮಿಶ್ರವಾಗಿ ಚುನಾವಣೆ ಮಾಡಿದ್ದಾಗ ಇವರು ಏನು ಮಾಡಿದ್ರು. ಜನರ ತೀರ್ಮಾನ ಒಪ್ಪಿದ್ದೇವೆ. ನಮಗೂ ಮಾತನಾಡಲು ಬರುತ್ತದೆ. ಹೊಸ ಡಾಂಬರು ಬೇಡ, ಗುಂಡಿ ಬಿದ್ದಿರುವುದನ್ನ ಮುಚ್ಚಲಿ ಎಂದು ಮಾಜಿ ಸಚಿವ ಪುಟ್ಟರಾಜು ತಿರುಗೇಟು ನೀಡಿದರು.
ಕಾಂಗ್ರೆಸ್ ನಲ್ಲಿ ಇದೀಗ ಏನು ಆಗುತ್ತಿದೆ ನೋಡಿ. ಇದನ್ನ ಚಲುವರಾಯಸ್ವಾಮಿ ಹೇಳಬೇಕು. ಇದು ಬಹಳ ದಿನ ನಡೆಯುವುದಿಲ್ಲ. ಲಘುವಾಗಿ ಮಾತನಾಡಬೇಡಿ. ಗೌರವ ಇಟ್ಟುಕೊಂಡು ಮಾತನಾಡಿ. ಇದು ಕೊನೆಯಾಗದೇ ಇದ್ದರೇ ನಾವು ಮಾತನಾಡುತ್ತೇವೆ. ನಾವು ನಾಯಕನ ಹತ್ತಿರ ಸೈ ಅನ್ನಿಸಿಕೊಳ್ಳಲು ಕೆಲಸ ಮಾಡುತ್ತೇವೆ. ಅದರಲ್ಲಿ ತಪ್ಪೇನೂ ಇದೆ. ನಮ್ಮದು ದೇವೇಗೌಡರ ಮನೆ ಮಾತ್ರ. ಅವರು ಸಿದ್ದರಾಮಯ್ಯ ಜೊತೆ ಇರಬೇಕಾ, ಶಿವಕುಮಾರ್ ಜೊತೆ ಇರಬೇಕಾ ಎಂಬ ಗೊಂದಲದಲ್ಲಿ ಇದ್ದಾರೆ. ನಮ್ಮ ಪಕ್ಷದ ಗೊಂದಲದ ಬಗ್ಗೆ ಇವರು ಯಾಕೆ ಮಾತನಾಡುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಜಸ್ಟ್ ಪಾಸಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಇದೇ ವೇಳೆ ನಿಖಿಲ್ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡುವ ಬಗ್ಗೆ ಮಾತನಾಡಿದ ಪುಟ್ಟರಾಜು, ಈ ವಿಚಾರದಲ್ಲಿ ದೇವೇಗೌಡರು ತೀರ್ಮಾನ ಮಾಡುತ್ತಾರೆ . ಕಾಂಗ್ರೆಸ್ ನಲ್ಲೂ ವಂಶರಾಜಕಾರಣ ಇದೆ. ಜವಾಹರ್ ಲಾಲ್ ನೆಹರು ಕುಟುಂಬದಲ್ಲಿ ಕೂಡ ಕುಟುಂಬ ರಾಜಕಾರಣ ಇದೆ. ದೇವೇಗೌಡರ ಕುಟುಂಬ ರಾಜಕಾರಣ ಮಾಡಿದ್ರೆ ತಪ್ಪೇನು ಎಂದು ಸಮರ್ಥಿಸಿಕೊಂಡರು.
ವರದಿ : ಗಿರೀಶ್ ರಾಜ್ ಮಂಡ್ಯ