ಹಾವೇರಿ: ಮಂಡ್ಯದಲ್ಲಿ ಹನುಮಧ್ವಜ ತೆರವು ಹಿನ್ನಲೆ ಹಾವೇರಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೇ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪದೇಪದೆ ಒಂದು ಮಾತು ಹೇಳ್ತಿರ್ತಾರೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಯಾವಾಗಲೂ ಹೇಳ್ತಿರ್ತಾರೆ. ಎಲ್ಲಿದೆ ಸರ್ವ ಜನಾಂಗದ ತೋಟ? ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲೂ ಹಲವು ಕಡೆ ಅಡೆತಡೆ ಗಳಾದವು, ಅರೆಸ್ಟ್ ಆಗಿವೆ. ಎಲ್ಲ ಕಡೆ ಸಮಸ್ಯೆ ಆಗುತ್ತಿದೆ. ರಾಮಮಂದಿರ ಶೋಭಾಯಾತ್ರೆ ವೇಳೆ ಕಲ್ಲು ತೂರಿದ್ದಾರೆ. ಇಂಥ ಸಮಾಜಘಾತುಕರನ್ನು ಬಂಧಿಸುವ ಬದಲು ಸರ್ಕಾರ ಅಂತವರಿಗೆ ರಕ್ಷಣೆ ನೀಡುತ್ತಿದ್ದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇವರು ಎಸ್ಐಟಿ ರಚನೆ ಮಾಡಲಿಲ್ಲ. ಹೀಗಾಗಿ ನಾವೇ ಒಂದು ಪಿಐಎಲ್ ಹಾಕುತ್ತೇವೆ. ಅತ್ಯಾಚಾರ ಮಾಡಿದವರು ಯಾವ ಕೋಮಿನವರು ಎಂಬುದರ ಕೇಸ್ ದಾಖಲಿಸುತ್ತದೆ. ಮುಸ್ಲಿಂ ಓಲೈಕೆಯಿಂದಲೇ, ಏನೇ ಮಾಡಿದರೂ ಶಿಕ್ಷೆಯಾಗುವುದಿಲ್ಲ ಕನಿಷ್ಠ ಪಕ್ಷ ಬಂಧಿಸುವುದಿಲ್ಲ ಎಂಬುದು ದುಷ್ಕರ್ಮಿಗಳಿಗೆ ಗೊತ್ತಿರುವುದರಿಂದ ಇಂಥ ಕೃತ್ಯಗಳು ಪದೇಪದೆ ನಡೆಯುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನೂ ಚಿತ್ರದುರ್ಗದಲ್ಲಿ ಸರ್ಕಾರದಿಂದ ಶೋಷಿತರ ಸಮಾವೇಶ ನಡೆಯುತ್ತಿರುವ ವಿಚಾರ ಸಂಬಂಧ ಮಾತನಾಡಿದ ಅವರು, ಅಹಿಂದ ವರ್ಗಗಳನ್ನೇ ಮೆಟ್ಟಿಲು ಮಾಡಿಕೊಂಡು ಎರಡು ಸಲ ಸಿಎಂ ಆಗಿರುವ ಸಿದ್ದರಾಮಯ್ಯ ಆ ಸಮುದಾಯಗಳಿಗೆ ಏನು ಮಾಡಿದ್ರು ಎಂಬುದು ಮೊದಲು ಹೇಳಲಿ. ಹಿಂದುಳಿದ ವರ್ಗ, ಎಸ್ಸಿ ಎಸ್ಟಿ ಜನಾಂಗಕ್ಕೆ ಏನು ಮಾಡಿದ್ರಿ? ದಲಿತರಿಗೆ ಮೀಸಲಿಟ್ಟ 11300 ಕೋಟಿ ರೂಪಾಯಿ ಹಣ ಡೈವರ್ಟ್ ಮಾಡಿದ್ರಿ. ದಲಿತರ ಹಣ ಡೈವರ್ಟ್ ಯಾಕೆ ಮಾಡಿದ್ರಿ? ದಲಿತರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದಲಿತರಿಗೆ ನ್ಯಾಯ ಒದಗಿಸಿದ್ದೇ ನಾವು. ನಮ್ಮ ಅಧಿಕಾರಾವಧಿಯಲ್ಲಿ ದಲಿತರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಾಗ ಅದನ್ನು ಕಾಂಗ್ರೆಸ್ ಅವರು ಚುನಾವಣೆ ಸ್ಟಂಟ್ ಎಂದರು.