ಕವಿತಾಳ :- ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ದರ ಸಿಗುತ್ತಿರುವ ಹಿನ್ನೆಲೆಯಲ್ಲಿ ತೊಗರಿ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ ₹10 ಸಾವಿರ ಮೇಲ್ಪಟ್ಟು ಮಾರಾಟವಾಗುತ್ತಿದ್ದು, ರೈತರು ದಾಸ್ತಾನು ಮಾಡದೆ ಮಾರಾಟ ಮಾಡುತ್ತಿದ್ದಾರೆ.
ಕಳೆದ ವರ್ಷ ಒಂದು ಕ್ವಿಂಟಲ್ಗೆ ₹7 ಸಾವಿರ ಇದ್ದ ದರ ಈ ವರ್ಷ ₹10 ಸಾವಿರಕ್ಕೆ ಏರಿಕೆ ಆಗಿರುವುದು ರೈತರಲ್ಲಿ ಕೊಂಚ ನೆಮ್ಮದಿಗೆ ಕಾರಣವಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 9,735 ಹೆಕ್ಟೇರ್ ತೊಗರಿ ಬಿತ್ತನೆ ಆಗಿದೆ. ‘ಮಳೆ ಕೊರತೆ ಮತ್ತು ಕೀಟ ಬಾಧೆಯಿಂದ ಇಳುವರಿ ಕಡಿಮೆ ಬಂದಿದ್ದರೂ ಉತ್ತಮ ದರ ಸಿಗುತ್ತಿರುವ ಕಾರಣ ನಷ್ಟವಂತೂ ಉಂಟಾಗುವುದಿಲ್ಲ’ ಎಂದು ರೈತರು ಹೇಳುತ್ತಿದ್ದಾರೆ.
ಕವಿತಾಳ ಸೇರಿದಂತೆ ಹಿರೇಹಣಿಗಿ, ಸೈದಾಪುರ, ಹುಸೇನಪುರ, ತೊಪ್ಪಲದೊಡ್ಡಿ, ವಟಗಲ್, ಯಕ್ಲಾಸ್ಪುರ, ಅಮೀನಗಡ ಮತ್ತು ಪಾಮನಕಲ್ಲೂರು ಸುತ್ತಮುತ್ತಲಿನ ಮಳೆ ಆಧಾರಿತ ಕೃಷಿ ಭೂಮಿಯಲ್ಲಿ ಹೆಚ್ಚಿನ ರೈತರು ತೊಗರಿ ಬೆಳೆದಿದ್ದು ಉತ್ತಮ ದರ ಸಿಗುತ್ತಿರುವ ಕಾರಣ ಉತ್ಸಾಹದಿಂದ ತೊಗರಿ ಕಣ ಮಾಡುತ್ತಿದ್ದಾರೆ.
ಅಂದಾಜು 120 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡುತ್ತಿದ್ದು, ಕಳೆದ ವರ್ಷ 600 ಕ್ವಿಂಟಲ್ ಬೆಳೆ ಬಂದಿತ್ತು. ಈ ವರ್ಷ ಕೇವಲ 300 ಕ್ವಿಂಟಲ್ ಬೆಳೆ ಬಂದಿದೆ. ಶೇ 50ರಷ್ಟು ಇಳುವರಿ ಕಡಿಮೆಯಾಗಿದೆ. ಅದೇ ರೀತಿ ಈ ವರ್ಷ ಮಳೆ ಕೊರತೆ ಹಾಗೂ ರೋಗಭಾದೆಯಿಂದ ನಿರ್ವಹಣೆ ವೆಚ್ಚವೂ ಶೇ 25ರಷ್ಟು ಹೆಚ್ಚಾಗಿದೆ. ಉತ್ತಮ ಧಾರಣೆಯಿಂದ ಸ್ವಲ್ಪ ಅನುಕೂಲವಾಗಿದೆ. ಹೆಚ್ಚಿನ ಲಾಭವಾಗಿದೆ ಎಂದು ಹೇಳಲು ಆಗದಿದ್ದರೂ ಹತ್ತಿ ಬೆಳೆಯಲ್ಲಿ ಉಂಟಾದ ನಷ್ಟ ಸರಿದೂಗಿಸುವಷ್ಟು ಸಹಾಯವಾಗಿದೆ ಎನ್ನಬಹುದು’ ಎಂದು ರೈತ ಮೌನೇಶ ಹಿರೇಕುರುಬರ ಹೇಳಿದರು.