ಎಲ್ಲಾ ಪ್ರೇಮಿಗಳು ಎದುರು ನೋಡುತ್ತಿದ್ದ ದಿನ ಬಂದಿದೆ. ಇಡೀ ವಿಶ್ವವೇ ಪ್ರತಿ ವರ್ಷ ಆಚರಿಸುವ ವಿಶೇಷ ದಿನಗಳಲ್ಲಿ ವ್ಯಾಲೆಂಟೈನ್ ಡೇ ಕೂಡಾ ಒಂದು. ಪರ-ವಿರೋಧ ಚರ್ಚೆಗಳ ನಡುವೆ, ಆಚರಣೆಯ ವಿರೋಧದ ನಡುವೆಯೂ ಪ್ರತಿ ವರ್ಷ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಆಚರಿಸುತ್ತಾ ಬಂದಿದ್ದಾರೆ
ಆದ್ರೆ ಅವರಲ್ಲಿ ಅನೇಕರಿಗೆ ಪ್ರೇಮಿಗಳ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಗೊತ್ತೇ ಇರುವುದಿಲ್ಲ. ಹಾಗಿದ್ರೆ ಈ ದಿನವನ್ನು ಯಾಕೆ ಆಚರಿಸಲಾಗುತ್ತದೆ? ಇದರ ಇತಿಹಾಸವೇನು? ಮಹತ್ವವೇನು ಅನ್ನೋದನ್ನು ನೋಡೋಣ.
![Demo](https://ainlivenews.com/wp-content/uploads/2023/12/spoorthi-1.jpg)
ವ್ಯಾಲೆಂಟೈನ್ಸ್ ಡೇ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಒಂದು ಮೂಲದ ಪ್ರಕಾರ ವ್ಯಾಲೆಂಟೈನ್ಸ್ ಡೇ ಅನ್ನು 14 ನೇ ಶತಮಾನದವರೆಗೆ ಪ್ರಣಯದ ದಿನವಾಗಿ ಆಚರಿಸಿದ ಬಗ್ಗೆ ದಾಖಲೆಗಳಿಲ್ಲ. 8 ನೇ ಶತಮಾನದ ಗೆಲಾಸಿಯನ್ ಸ್ಯಾಕ್ರಮೆಂಟರಿಯಲ್ಲಿ ಫೆಬ್ರವರಿ 14 ರಂದು ಸೇಂಟ್ ವ್ಯಾಲೆಂಟೈನ್ ಹಬ್ಬದ ಆಚರಣೆ ದಾಖಲಾಗಿದೆ.
ಯಾರು ಈ ವ್ಯಾಲೆಂಟೈನ್..?
ವ್ಯಾಲೆಂಟೈನ್, ರೋಮ್ಗೆ ಸೇರಿದ ಪಾದ್ರಿ. ಸುಮಾರು 3ನೇ ಶತಮಾನದಲ್ಲಿ ಅಂದರೆ ಕ್ರಿ.ಶ. 260 ಸಮಯದಲ್ಲಿ ರೋಮ್ ರಾಜ ಕ್ಲಾಡಿಯಸ್, ಪ್ರೇಮ ಹಾಗೂ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ನಿರ್ಬಂಧ ವಿಧಿಸಿರುತ್ತಾನೆ. ಸೈನಿಕರು ಮದುವೆ ಆಗಬಾರದು ಎಂಬ ನಿಯಮ ಕೂಡಾ ವಿಧಿಸುತ್ತಾನೆ. ಒಂದು ವೇಳೆ ನಿಯಮ ಮೀರಿ ನಡೆದರೆ ಅಂತವರನ್ನು ಕ್ರೂರವಾಗಿ ಶಿಕ್ಷಿಸುತ್ತಿದ್ದ. ಪ್ರೀತಿ, ಪ್ರೇಮ, ಮದುವೆ ಎಂಬ ಸಂಬಂಧದಲ್ಲಿ ಇರುವವರು ಸಮಯ ವ್ಯರ್ಥ ಮಾಡುತ್ತಾರೆ, ಹಾಗೂ ತಮ್ಮ ಪ್ರೀತಿ ಪಾತ್ರರನ್ನು ಬಿಟ್ಟು ಸೈನ್ಯಕ್ಕೆ ಬರುವುದಿಲ್ಲ ಎಂಬ ಉದ್ದೇಶದಿಂದ ರಾಜ ಕ್ಲಾಡಿಯಸ್, ಈ ಕ್ರಮ ಕೈಗೊಂಡಿದ್ದ. ಆದರೆ ಇದಕ್ಕೆ ವಿರುದ್ಧವಾಗಿ ಪಾದ್ರಿ ವ್ಯಾಲೆಂಟೈನ್, ಪ್ರೇಮಿಗಳಿಗೆ ಹಾಗೂ ಮದುವೆಯಾಗಬೇಕೆಂದುಕೊಂಡ ಸೈನಿಕರಿಗೆ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದರು.
ವಸಂತಕಾಲದ ಆರಂಭದಲ್ಲಿ ಇದನ್ನು ಆಚರಿಸಲಾಗುತ್ತಿತ್ತು. ಈ ಹಬ್ಬದಲ್ಲಿ ಲಾಟರಿ ಮೂಲಕ ಮಹಿಳೆಯರನ್ನು ಪುರುಷರೊಂದಿಗೆ ಜೋಡಿಸಲಾಗುತ್ತಿತ್ತು.
ಪೋಪ್ ಗೆಲಾಸಿಯಸ್ I ಈ ಹಬ್ಬವನ್ನು ಸೇಂಟ್ ವ್ಯಾಲೆಂಟೈನ್ಸ್ ಡೇಗೆ ಬದಲಾಯಿಸಿದರು ಎಂದು ಹೇಳಲಾಗುತ್ತದೆ. ಸುಮಾರು 14 ನೇ ಶತಮಾನದ ಅವಧಿಯಲ್ಲಿ ಇದನ್ನು ಪ್ರೇಮಿಗಳ ದಿನವಾಗಿ ಆಚರಿಸಲಾಯಿತು.
ಈ ಮಧ್ಯೆ, ವ್ಯಾಲೆಂಟೈನ್ಸ್ ಡೇ ಜನಪ್ರಿಯವಾಗಿ ಪ್ರೀತಿಯ ದೇವತೆ ಕ್ಯುಪಿಡ್ ಅನ್ನು ಆರಾಧಿಸುವುದಾಗಿದೆ. ರೋಮನ್ ಪುರಾಣದ ಪ್ರಕಾರ, ಕ್ಯುಪಿಡ್ ಶುಕ್ರನ ಮಗ. ಇದು ಪ್ರೀತಿ ಮತ್ತು ಸೌಂದರ್ಯದ ದೇವತೆ ಕ್ಯುಪಿಟ್, ಬಿಲ್ಲು ಮತ್ತು ಬಾಣವು ಹೃದಯವನ್ನು ಚುಚ್ಚುವುದನ್ನು ಚಿತ್ರಿಸುತ್ತದೆ. ಆದ್ದರಿಂದ, ಈ ಹಬ್ಬವು ಪ್ರೀತಿಯ ಭಾವನೆಯನ್ನು ಆಚರಿಸುವುದಾಗಿದೆ.
ವ್ಯಾಲೆಂಟೈನ್ ದೇಹವನ್ನು ಸಮಾಧಿ ಮಾಡಿದ ದಿನವನ್ನು (ಫೆಬ್ರವರಿ 14) ಪ್ರತಿ ವರ್ಷ ವ್ಯಾಲೆಂಟೈನ್ ಡೇಯನ್ನಾಗಿ ಆಚರಿಸುತ್ತಾ ಬರಲಾಗಿದೆ. ಆತ ಜೂಲಿಯಾಗೆ ಬರೆದ ಪತ್ರದ ಕೊನೆಯಲ್ಲಿ ‘ಇಂತಿ ನಿನ್ನ ವ್ಯಾಲೆಂಟೈನ್’ ಎಂದು ಬರೆದದ್ದನ್ನು ಇಂದಿಗೂ ಪ್ರೇಮಿಗಳು ತಮ್ಮ ಪ್ರೀತಿಯ ಹುಡುಗಿಗೆ ಪತ್ರ ಬರೆಯುವಾಗ ಇಂತಿ ನಿನ್ನ ವ್ಯಾಲೆಂಟೈನ್ ಎಂದು ಸಹಿ ಮಾಡುತ್ತಾರೆ. ಹಾಗೇ ವ್ಯಾಲೆಂಟೈನ್ ಸಮಾಧಿ ಬಳಿ ಜೂಲಿಯಾ, ಪಿಂಕ್ ಬಣ್ಣದ ಹೂಗಳನ್ನು ಬಿಡುವ ಗಿಡವೊಂದನ್ನು ನೆಟ್ಟ ಕಾರಣದಿಂದ ಹುಡುಗಿಯರಿಗೆ ಪ್ರೇಮ ನಿವೇದನೆ ಮಾಡುವಾಗ ಪಿಂಕ್ ಬಣ್ಣದ ವಸ್ತುಗಳನ್ನು ನೀಡಲಾಗುತ್ತದೆ ಎಂಬ ನಂಬಿಕೆ ಇದೆ.
ಒಟ್ಟಿನಲ್ಲಿ ಹಿನ್ನೆಲೆ ಏನೇ ಇರಲಿ, ಪವಿತ್ರ ಪ್ರೀತಿಯ ಸಂಕೇತವಾಗಿ ಪ್ರೇಮಿಗಳಿಗಾಗಿ ಒಂದು ವಿಶೇಷ ದಿನ ಮೀಸಲಾಗಿದೆ. ಉಡುಗೊರೆ, ಆಡಂಬರ ಇಲ್ಲಿ ಮುಖ್ಯವಲ್ಲ. ಒಬ್ಬರ ಪ್ರೀತಿಯನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು, ಕಷ್ಟ-ಸುಖಗಳಲ್ಲಿ ಜೊತೆಗಿದ್ದರೆ ಫ್ರೆಬ್ರವರಿ 14 ಮಾತ್ರವಲ್ಲ, ಪ್ರತಿ ದಿನವೂ ವ್ಯಾಲೆಂಟೈನ್ಸ್ ಡೇ.
![](https://ainlivenews.com/wp-content/uploads/2024/01/Ad-Banner-copy-scaled.jpg)