ಉಡುಪಿ:- ಮಹಿಳೆಯೊಬ್ಬರು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಜರುಗಿದೆ.
45 ವರ್ಷದ ಅಂಬಾ ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಭಾರಿ ಮಳೆ ಮೊದಲ ಬಲಿ ಪಡೆದಿದೆ. ಇನ್ನುಸ್ಥಳೀಯರ ಸಹಾಯದಿಂದ ಮಣ್ಣು ಸರಿಸಿ ಮೃತದೇಹವನ್ನ ಮೇಲಕ್ಕೆತ್ತಲಾಗಿದೆ.
ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು, ಬೈಂದೂರು ತಾಲೂಕಿನ ನಾವುಂದ, ಬಡಾಕೇರಿ, ಮರವಂತೆ, ಸಾಲ್ಬುಡ, ಅರೆಹೊಳೆ ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಈ ಹಿನ್ನಲೆ ಸ್ಥಳೀಯ ಯುವಕರು ಸೇರಿಕೊಂಡು ಪ್ರವಾಹ ಪೀಡಿತ ಪ್ರದೇಶಗಳಿಗೆ ಮೂರು ದೋಣಿ ಮೂಲಕ ತೆರಳಿ ರಕ್ಷಣಾ ಕಾರ್ಯದ ಜೊತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಂದಾಪುರ ಎಸಿ ರಶ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.