ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ ತಿಳಿಸಿದರು.
ಬೆಂಗಳೂರಿನಲ್ಲಿ (Bengaluru) ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯೋಗೀಶ್ವರ್ (CP Yogeshwar) ಅವರು ಚನ್ನಪಟ್ಟಣದಲ್ಲಿ ತಾವೂ ಸ್ಪರ್ಧಾಕಾಂಕ್ಷಿ ಎಂದು ಹೇಳಿದ್ದು ತಪ್ಪೆನ್ನುವುದಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಅವರಿಗೆ ಅವರದ್ದೇ ಆದ ಹಿಡಿತ, ಬೆಂಬಲ ಇದೆ. ಆದರೆ ಬಿಜೆಪಿ-ಜೆಡಿಎಸ್ ಪಕ್ಷಗಳು ಒಟ್ಟಾಗಿ ಹೋಗುವ ಸಂದರ್ಭ ಇದು. ಅಲ್ಲಿ ಕುಮಾರಸ್ವಾಮಿ ಅವರು ಆಯ್ಕೆ ಆಗಿದ್ದರು. ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿವರಿಸಿದರು
ಬಿಜೆಪಿ- ಜೆಡಿಎಸ್ (BJP-JDS) ಪಕ್ಷಗಳು ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಿದ್ದೇವೆ. ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ರಚಿಸಿ ಅಭಿಪ್ರಾಯ ಪಡೆದಿದ್ದೇವೆ. ಅಶ್ವಥ್ ನಾರಾಯಣ್ ಅವರ ಸಮಿತಿಯ ವರದಿ ಬಗ್ಗೆ ಮಾಹಿತಿ ಇಲ್ಲ. ನಾನು ಕೂಡ ಅಶ್ವಥ್ ನಾರಾಯಣ್ ಜೊತೆ ಚರ್ಚೆ ಮಾಡುವೆ. ವರಿಷ್ಠರ ಗಮನಕ್ಕೆ ತರುತ್ತೇನೆ ಎಂದರು