ರಾಯ್ಪುರ್: ಹಿಂದೂ ದೇವರನ್ನು (Hindu God) ನಂಬಬೇಡಿ, ಬೌದ್ಧ ಧರ್ಮ ಅಳವಡಿಸಿಕೊಳ್ಳಿ ಅಂತ ಶಿಕ್ಷಕರೊಬ್ಬರು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದ ಘಟನೆ ಛತ್ತೀಸ್ಘಡದ ಬಿಲಾಸ್ಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಶಿಕ್ಷಕ ರತನ್ಲಾಲ್ ಸರೋವರ್ ರನ್ನು ಬಂಧಿಸಲಾಗಿದೆ. ಮುಖ್ಯ ಶಿಕ್ಷಕನ ಸ್ಥಾನದಿಂದಲೂ ಅಮಾನತುಗೊಳಿಸಲಾಗಿದೆ.
ನಡೆದಿದ್ದೇನು..?: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಆರೋಪಿ ಮುಖ್ಯಸ್ಥರು ಮೊಹ್ತರಾಯ್ ಗ್ರಾಮದಲ್ಲಿ ಮಕ್ಕಳು ಮತ್ತು ಜನರ ಗುಂಪನ್ನು ಒಟ್ಟುಗೂಡಿಸಿದ್ದಾರೆ. ಬಳಿಕ ಅವರಿಗೆ ಹಿಂದೂ ದೇವರುಗಳನ್ನು ನಾವು ಪೂಜಿಸುವುದಿಲ್ಲ. ಬೌದ್ಧ ಧರ್ಮವನ್ನು ಅನುಸರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.
ಈ ಸಂಬಂಧ ಹಿಂದೂ ಸಂಘಟನೆಯೊಂದರ ಪದಾಧಿಕಾರಿ ರೂಪೇಶ್ ಶುಕ್ಲಾ ಎಂಬವರು ಹೆಡ್ ಮಾಸ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಶಿವ, ರಾಮ, ಕೃಷ್ಣ ಸೇರಿದಂತೆ ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಮತ್ತು ಬೌದ್ಧ ಧರ್ಮವನ್ನು ಅನುಸರಿಸುವುದಾಗಿ ಪ್ರಮಾಣ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವರ ಈ ಕ್ರಮ ಸನಾತನ ಧರ್ಮದಲ್ಲಿ ನಂಬಿಕೆ ಇರುವ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿತು. ಸದ್ಯ ದೂರಿನ ಆಧಾರದ ಮೇಲೆ ಹೆಡ್ಮಾಸ್ಟರ್ ವಿರುದ್ಧ ಐಪಿಸಿ ಸೆಕ್ಷನ್ 153A (ಧರ್ಮ, ಜಾತಿ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.