ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಮಹಾಕುಂಭಮೇಳ ಇಂದು ಸಂಪನ್ನವಾಗಲಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಈವರೆಗೂ ಸರಿ ಸುಮಾರು 64 ಕೋಟಿ ಭಕ್ತರು ಭೇಟಿ ಕೊಟ್ಟಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 13 ರಂದು ಮಹಾಕುಂಭಮೇಳ ಪ್ರಾರಂಭವಾದಾಗಿನಿಂದಲೂ ಈವರೆಗೂ ಪ್ರಯಾಗ್ರಾಜ್ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ನಾಳೆ ಶಿವರಾತ್ರಿ ಕೊನೆಯ ದಿನವಾಗಿರುವುದರಿಂದ 1 ಕೋಟಿಗೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ.
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಇಂದು ಮುಕ್ತಾಯವಾಗಲಿದೆ. ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಜನ ಸೇರಿ ಹೊಸ ದಾಖಲೆ ನಿರ್ಮಾಣವಾಗಿದೆ. ಜೊತೆಗೆ ಶತಮಾನದಲ್ಲೇ ಅತ್ಯಂತ ಅಪರೂಪದ ಧಾರ್ಮಿಕ ಘಟನೆಯಾಗಿದ್ದು, ಇಂದು ಮಹಾಶಿವರಾತ್ರಿಯ ಅಂತಿಮ ಪುಣ್ಯ ಸ್ನಾನ ನಡೆಯುತ್ತಿದೆ.
ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ಮಹಾಶಿವರಾತ್ರಿಯ ಶುಭದಿನವಾದ ಇಂದು ಕೋಟ್ಯಂತರ ಭಕ್ತರು ಇಂದು ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಬಾರಿ ಮಹಾಶಿವರಾತ್ರಿಯ ಶುಭ ಸಮಯದಲ್ಲಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಶುರು ಮಾಡಿದ್ದಾರೆ. ಮಕರ ರಾಶಿಯಲ್ಲಿ ಚಂದ್ರನ ಸಂಚಾರದೊಂದಿಗೆ ಶಿವ ಭಕ್ತರು ಪರಿಘ ಯೋಗದ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಕೊನೆಯ ಸ್ನಾನ ಮಹೋತ್ಸವದ ಪುಣ್ಯ ಗಳಿಸುತ್ತಿದ್ದಾರೆ.
Maha Shivratri 2025: ಮಹಾಶಿವರಾತ್ರಿ ಹಬ್ಬದ ಪೂಜಾ ಮುಹೂರ್ತ, ಇತಿಹಾಸ ಮತ್ತು ಮಹತ್ವ ತಿಳಿಯಿರಿ!
ಪಂಚಾಂಗದ ಪ್ರಕಾರ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಇಂದು ಬೆಳಗ್ಗೆ 11:08ಕ್ಕೆ ಪ್ರಾರಂಭವಾಗಿ ಗುರುವಾರ ಬೆಳಗ್ಗೆ 08:54ರವರೆಗೆ ಇರಲಿದೆ. ಮಹಾಶಿವರಾತ್ರಿಯಂದು ಸ್ನಾನ ಮಾಡಲು ಶುಭ ಸಮಯ ನಾಳೆ ಬೆಳಗ್ಗೆ 9 ಗಂಟೆಯವರೆಗೆ ಇರಲಿದೆ. ಇಂದು ಮಹಾಶಿವರಾತ್ರಿಯ ದಿನದಂದು ಬ್ರಹ್ಮ ಮುಹೂರ್ತವು ಬೆಳಗ್ಗೆ 05:09ಕ್ಕೆ ಪ್ರಾರಂಭವಾಗಿದ್ದು ಸಂಜೆ 5:59ಕ್ಕೆ ಕೊನೆಗೊಳ್ಳುತ್ತದೆ. ಇಂದು ಮಹಾ ಕುಂಭಮೇಳದ ಕೊನೆಯ ಸ್ನಾನವು ಮಹಾ ಶಿವರಾತ್ರಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಪ್ರಾರಂಭವಾಗಿದ್ದು, ಬ್ರಹ್ಮ ಮುಹೂರ್ತದ ಸಮಯದಲ್ಲಿ ಸಂಗಮ ಸ್ನಾನ ಮಾಡುವುದು ವಿಶೇಷವಾಗಿ ಫಲಪ್ರದವಾಗಿದೆ. ಈ ದಿನದಂದು ಪೂಜೆ ಮಾಡುವುದರಿಂದ ಶಿವನ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.
ಅತಿದೊಡ್ಡ ಧಾರ್ಮಿಕ ಸಭೆಯ ಭಾಗವಾಗಲು ಪ್ರಯಾಗ್ರಾಜ್ಗೆ ಭಕ್ತರ ದಂಡೇ ಹರಿದು ಬರುತ್ತಿದೆ. ರೈಲುಗಳು, ವಿಮಾನಗಳು ಮತ್ತು ರಸ್ತೆ ಮಾರ್ಗಗಳು ತುಂಬಿ ತುಳುಕುತ್ತಿವೆ. ಶಿವರಾತ್ರಿಯ ದಿನದಂದು ಪವಿತ್ರ ಸ್ನಾನ ಮಾಡಲು ಭಕ್ತರ ಅನುಕೂಲಕ್ಕಾಗಿ ಮಾಡಲಾದ ವಿಶೇಷ ವ್ಯವಸ್ಥೆಗಳ ಭಾಗವಾಗಿ, ಅಧಿಕಾರಿಗಳು ಲಕ್ನೋ ಮತ್ತು ಪ್ರತಾಪ್ಗಢದಿಂದ ಬರುವ ಯಾತ್ರಾರ್ಥಿಗಳಿಗೆ ಫಾಫಮೌ ಘಾಟ್ ಅನ್ನು ಗೊತ್ತುಪಡಿಸಿದ್ದಾರೆ. ಆದರೆ ಅರೈಲ್ ಘಾಟ್ ಅನ್ನು ರೇವಾನ್, ಬಂದಾ, ಚಿತ್ರಕೂಟ ಮತ್ತು ಮಿರ್ಜಾಪುರದ ಜನರಿಗೆ ಕಾಯ್ದಿರಿಸಲಾಗಿದೆ. ಕೌಶಂಬಿಯಿಂದ ಬರುವ ಭಕ್ತರಿಗಾಗಿ ಸಂಗಮ್ ಘಾಟ್ ಅನ್ನು ಗೊತ್ತುಪಡಿಸಲಾಗಿದೆ.
ಭದ್ರತಾ ವ್ಯವಸ್ಥೆಗಳ ವಿಷಯದಲ್ಲಿ, ಇಡೀ ಮೇಳ ಪ್ರದೇಶದಲ್ಲಿ ಯಾವುದೇ ವಾಹನಗಳನ್ನು ಅನುಮತಿಸಲಾಗುತ್ತಿಲ್ಲ. ಆದರೆ ಪಾಸ್ಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರ ಗೊತ್ತುಪಡಿಸಿದ ಪಾರ್ಕಿಂಗ್ ಪ್ರದೇಶಗಳಲ್ಲಿ ನಿಲುಗಡೆ ಮಾಡಲು ಅವಕಾಶವಿರುತ್ತದೆ. ಪ್ರಯಾಗ್ರಾಜ್ಗೆ ಹೋಗುವ ಎಲ್ಲಾ ಪ್ರಮುಖ ಹೆದ್ದಾರಿಗಳು ಮತ್ತು ಮಾರ್ಗಗಳಲ್ಲಿ ಮೋಟಾರ್ ಬೈಕ್ಗಳಲ್ಲಿ ಪೊಲೀಸರ 40 ತಂಡಗಳನ್ನು ನಿಯೋಜಿಸಲಾಗಿದೆ. ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ, ಮಾರ್ಗ ಬದಲಾವಣೆಗಳನ್ನು ರಚಿಸಲಾಗಿದೆ.