ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವ್ಯಾಪ್ತಿಯ ಗೋಕುಲ ರಸ್ತೆ, ವಿದ್ಯಾನಗರ ಮತ್ತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗಳ ನೂತನ ಕಟ್ಟಡಗಳನ್ನು ಇಂದು ಗೃಹ ಸಚಿವರಾದ ಡಾ.ಜಿ ಪರಮೇಶ್ವರ ಅವರು ಉದ್ಘಾಟಿಸಿ, ಜನಸೇವೆಗೆ ಮುಕ್ತಗೊಳಿಸಿದ್ದು ಸಂತಸ ತಂದಿದೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಮೂರೂ ಠಾಣೆಗಳ ನಿರ್ಮಾಣಕ್ಕೆ 2022ರ ಸೆಪ್ಟೆಂಬರ್ 4ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದ್ದರು. ಪೊಲೀಸ್ ಗೃಹ ಮಂಡಳಿಯು ಹೆಚ್ಚುವರಿ ಅವಧಿ ಪಡೆದು ಕಟ್ಟಡ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದೆ. ಆದರೆ, ಚುನಾವಾಣೆ ನೀತಿ ಸಂಹಿತೆ ಸೇರಿ ವಿವಿಧ ಕಾರಣಗಳಿಂದ ಮುಂದೂಡಲಾದ ಉದ್ಘಾಟನಾ ಕಾರ್ಯಕ್ರಮವು, ಇಂದು ಕೈಗೂಡಿದ್ದು ಒಳ್ಳೆಯ ವಿಚಾರ ಎಂದರು.
GST Council Meetings: ಪಾಪ್ ಕಾರ್ನ್ ಮೇಲೆ 3 ರೀತಿಯ GST! 20ರೂ ಪ್ಯಾಕೆಟ್ ಬೆಲೆ ಎಷ್ಟು ಹೆಚ್ಚಾಗಲಿದೆ ಗೊತ್ತಾ.?
ಈ ಎಲ್ಲಾ ಪೊಲೀಸ್ ಠಾಣೆಗಳು ಇಲ್ಲಿಯವರೆಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ, ಸಮಸ್ಯೆ ಎದುರಿಸುತ್ತಿದ್ದವು. ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಅಗತ್ಯತೆ ಹೆಚ್ಚಾಗಿತ್ತು. ಆದರೆ, ಈ ಎಲ್ಲಾ ಠಾಣೆಗಳಿರುವ ಪ್ರದೇಶಗಳು ಜನನಿಬಿಡವಾಗಿದ್ದರಿಂದ, ಕಟ್ಟಡ ಸ್ಥಾಪನೆಗೆ ಸ್ಥಳದ ಅಭಾವ ಎದುರಾಗಿತ್ತು. ಆದರೆ, ನಮ್ಮ ಎಲ್ಲಾ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುತುವರ್ಜಿಯಿಂದಾಗಿ ಇಂದು ಈ ಠಾಣೆಗಳಿಗೆ ಸ್ವಂತ ಕಟ್ಟಡಗಳು ನಿರ್ಮಾಣವಾಗಿವೆ ಎಂದು ತಮ್ಮ ಅಂದಿನ ಪ್ರಯತ್ನವನ್ನು ಸ್ಮರಿಸಿದರು.
ಅಲ್ಲದೇ, ಧಾರವಾಡದಲ್ಲಿ ಜನದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಗರದಲ್ಲಿ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಗಳ ಸ್ಥಾಪಿಸುವ ಅವಶ್ಯಕತೆ ಇದೆ. ಧಾರವಾಡದಲ್ಲಿ ಕನಿಷ್ಠ ಒಂದೊಂದು ಹೆಚ್ಚುವರಿ ಸಂಚಾರಿ, ಮಹಿಳಾ ಹಾಗೂ ಸಾಮಾನ್ಯ ಪೊಲೀಸ್ ಠಾಣೆಗಳ ಸ್ಥಾಪನೆಯಾಗಬೇಕಿದೆ. ಈ ವಿಚಾರವಾಗಿ ಗೃಹಮಂತ್ರಿಗಳೊಂದಿಗೆ ಚರ್ಚಿಸಲಿದ್ದು, ಆದಷ್ಟು ಶೀಘ್ರವಾಗಿ ಅನುಮೋದನೆ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.