ಬೆಳಗಾವಿ:– ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಟಾಸ್ಕ್ಫೋರ್ಸ್ ರಚಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆಗಳನ್ನು ತಡೆಯಲು ನಾವು ಸ್ಪಷ್ಟ ಕ್ರಮ ತೆಗೆದುಕೊಳ್ಳಲೇಬೇಕು. ಬಹಳ ಕಡೆ ಇದು ಅವ್ಯಾಹತವಾಗಿ ನಡೆಯುತ್ತಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂಬುದು ಗೊತ್ತಾಗಿದೆ. ಭ್ರೂಣ ಹತ್ಯೆ ಕೊಲೆಗಿಂತ ಕಮ್ಮಿಯೇನಲ್ಲ. ಹೀಗಾಗಿ ಭ್ರೂಣ ಹತ್ಯೆ ತಡೆಯಲು ರಾಜ್ಯ ಮಟ್ಟದ ಕಾರ್ಯಪಡೆ ರಚಿಸುತ್ತೇವೆ ಎಂದರು.
ಪರಿಷತ್ನಲ್ಲಿ ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಸಚಿವರು, ಇಂತಹ ಪ್ರಕರಣದಲ್ಲಿ ಬಂಧನದ ಸಂದರ್ಭದಲ್ಲಿ ಯಾವ ಯಾವ ಸೆಕ್ಷನ್ ಹಾಕಬೇಕು ಎಂಬುದನ್ನು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದನ್ನು ನೋಡುತ್ತಿದ್ದೇವೆ. ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯದ ಬಗ್ಗೆಯೂ ಕೂಡ ಚರ್ಚೆ ಮಾಡುತ್ತಿದ್ದೇವೆ. ಅಲ್ಟ್ರಾ ಸೌಂಡ್ ಮಿಷನ್ ಖರೀದಿಗೂ ಮಾರಾಟಕ್ಕೂ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದರು.