ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಮುಂಬರುವ ಆವೃತ್ತಿ ಸಲುವಾಗಿ ಟೂರ್ನಿಯ ಪ್ರಸಾರ ಹಕ್ಕು ಮತ್ತು ಅಂತಾರಾಷ್ಟ್ರೀಯ ಪ್ರಸಾರ ಹಕ್ಕಿನ ಮಾರಾಟವಾಗಿ ಮಧ್ಯ ಪ್ರವೇಶ ಮಾಡಿರುವ ಪಾಕ್ ಸರ್ಕಾರ, ಪಿಸಿಬಿ ವಿರುದ್ಧ 2 ವರ್ಷಗಳ ನಿಷೇಧ ಹೇರಿದೆ. ಲೀಗ್ ಸಲುವಾಗಿ ಪಿಸಿಬಿ ಬಿಡ್ಡಿಂಗ್ ನಡೆಸುವ ಪ್ರಕ್ರಿಯೆಗೆ ಮುಂದಾಗಿದ್ದ ಸಂದರ್ಭದಲ್ಲಿ ಪಾಕ್ ಸರ್ಕಾರ ನಿಷೇಧದ ಆದೇಶ ನೀಡಿದೆ ಎಂಬುದು ವರದಿಗಳ ಮೂಲಕ ತಿಳಿದು ಬಂದಿದೆ.
ಪಾಕಿಸ್ತಾನ ಸರ್ಕಾರದ ಅಂತರ ಪ್ರಾಂತೀಯ ಸಮನ್ವಯ ಸಮಿತಿ (ಸ್ಪೋರ್ಟ್ಸ್) ನೋಟೀಸ್ ಜಾರಿ ಗೊಳಿಸಿದೆ. ದೊಡ್ಡ ಮಟ್ಟದ ವ್ಯವಹಾರ ನಡೆಸುವ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರ್ಕಾರದ ಅನುಮತಿ ಪಡೆಯಬೇಕು ಎಂದು ನೋಟೀಸ್ ಮೂಲಕ ತಿಳಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ 11ನೇ ಆವೃತ್ತಿಗೆ ಪಿಸಿಬಿ ಇನ್ನೇನು ವೇಳಾಪಟ್ಟಿ ಪ್ರಕಟ ಮಾಡಬೇಕಿತ್ತು. ಈ ಸಂದರ್ಭದಲ್ಲಿ ನಿಷೇಧದ ತಲೆಬಿಸಿ ಎದುರಾಗಿದೆ.
ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಮಾಧ್ಯಮ ಪ್ರಸಾರ ಹಕ್ಕು ಮಾರಾಟ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೆಚ್ಚು ಆದಾಯ ಗಳಿಸುತ್ತದೆ. ಇದೀಗ ಸರ್ಕಾರದ ಮಧ್ಯ ಪ್ರವೇಶ ಕಾರಣ ಪಿಸಿಬಿಗೆ ಬರುವ ಭಾರಿ ಪ್ರಮಾಣದ ಆದಾಯಕ್ಕೆ ಕೊಕ್ಕೆ ಬೀಳುವ ಸಾಧ್ಯತೆ ಇದೆ. ಅಂದಹಾಗೆ ಟೂರ್ನಿಯ ಮಾಧ್ಯಮ ಹಕ್ಕುಗಳ ಮಾರಾಟಕ್ಕೆ ಬಿಡ್ಡಿಂಗ್ ಡಿಸೆಂಬರ್ 22ಕ್ಕೆ ನಡೆಯಬೇಕಿತ್ತು. ಈಗ ಸರ್ಕಾರದ ಮಧ್ಯ ಪ್ರವೇಶ ಕಾರಣ ಬಿಡ್ಡಿಂಗ್ ಪ್ರಕ್ರಿಯೆ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ ಎಂದು ಪಾಕಿಸ್ತಾನ ತಂಡದ ಕ್ರಿಕೆಟ್ ನಿರ್ವಹಣಾ ಸಮಿತಿ ಮುಖ್ಯಸ್ಥ ಝಾಕಾ ಅಶ್ರಫ್ ಹೇಳಿಕೆ ನೀಡಿದ್ದಾರೆ.