ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಬಹಳಷ್ಟು ಕಷ್ಟ ಪಡುತ್ತಿದ್ದಾಳೆ. ಅವಳ ಕಷ್ಟ ಕಂಡು ಮನೆಯವರು ಮಾತ್ರವಲ್ಲದೆ, ನೆರೆಮನೆಯವರು ಕೂಡ ಮರುಗುತ್ತಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾಗೆ ಎಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ. ಚಿನ್ನದ ಒಡವೆ ಹಿಡಿದುಕೊಂಡು ಮನೆಯ ಹೊರಗೆ ನಿಂತಿರುವ ತಾಂಡವ್ ಮತ್ತು ಶ್ರೇಷ್ಠಾ, ಭಾಗ್ಯಳನ್ನು ಕಂಡು ಕುಹಕವಾಡಿದ್ದಾರೆ. ಭಾಗ್ಯ, ತಾಂಡವ್ಗೆ ಮನೆಯ ಹೊರಗೆ ನಿಂತು ವಾಚ್ಮೆನ್ ಕೆಲಸ ಮಾಡುವುದು ಬೇಡ, ನಿಮ್ಮ ಕೆಲಸ ನೋಡಿಕೊಳ್ಳಿ, ಇಲ್ಲವಾದರೆ, ಮನೆ ಜಪ್ತಿಗೆ ಬರುವ ಬ್ಯಾಂಕ್ ಅಧಿಕಾರಿಗಳ ಎದುರು ನಿಂತು ಮಾತನಾಡಿ ಎಂದು ಹೇಳಿದ್ದಾಳೆ. ಭಾಗ್ಯಳ ಮಾತುಗಳು ತಾಂಡವ್ಗೆ ತೀವ್ರ ಅವಮಾನ ಉಂಟುಮಾಡಿದೆ. ಅವನು ಕೂಡಲೇ ಅಲ್ಲಿಂದ ಹೊರಟಿದ್ದಾನೆ. ಸ್ವಾಭಿಮಾನಿ ಭಾಗ್ಯಳ ಮಾತು ಕೇಳಿ ಶ್ರೇಷ್ಠಾ ಕೂಡ ಉರಿದುಹೋಗಿದ್ದಾಳೆ.
ವಿಜಯಪುರದಲ್ಲಿ ಕೆಎಚ್ಬಿ ಎಫ್ಡಿಎ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಇನ್ನೂ ಭಾಗ್ಯ ದೇವಸ್ಥಾನದಲ್ಲಿ ಸಿಕ್ಕ ಅಡುಗೆ ಉಸ್ತುವಾರಿ ವಹಿಸಿಕೊಂಡಿದ್ದಾಳೆ. ಆದರೆ ಅವಳ ಸಹಾಯಕ್ಕೆ ಬಂದಿದ್ದ ಪೂಜಾ, ಕಾಲಿಗೆ ಗಾಯ ಮಾಡಿಕೊಂಡ ಕುಸುಮಾಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾಳೆ.
ಭಾಗ್ಯಗೆ ಅಡುಗೆ ಕೆಲಸಕ್ಕೆ ನೆರವಾಗಲು ಬಂದಿದ್ದ ಕುಸುಮಾ, ಅಡುಗೆ ಮಾಡುವ ಅವಸರದಲ್ಲಿ ಕಾಲಿಗೆ ಬಿಸಿನೀರು ಹಾಕಿಕೊಂಡಿದ್ದಾಳೆ. ಇದರಿಂದ ಕಾಲಿಗೆ ಗಾಯವಾಗಿದೆ, ಹೀಗಾಗಿ ಭಾಗ್ಯ ಕೂಡಲೇ, ಪೂಜಾ ಜೊತೆ ಅವಳನ್ನು ಆಸ್ಪತ್ರೆಗೆ ಕಳುಹಿಸಿದ್ದಾಳೆ. ಅಲ್ಲಿ ವೈದ್ಯರು ಕುಸುಮಾ ಕಾಲಿಗೆ ಔಷಧಿ ಹಚ್ಚಿದ್ದಾರೆ. ಅತ್ತೆ ಈಗ ಆರಾಮವಾಗಿದ್ದಾರೆ ಎಂದು ಪೂಜಾ ಹೇಳುತ್ತಾಳೆ. ಅದನ್ನು ಕೇಳಿ ಭಾಗ್ಯ ನಿಟ್ಟುಸಿರು ಬಿಡುತ್ತಾಳೆ.
ಭಾಗ್ಯಗೆ ಅಡುಗೆ ಕೆಲಸ ಕೊಟ್ಟಿದ್ದ ಯಜಮಾನರು, ಅಡುಗೆ ಕೆಲಸ ಏನಾಯಿತು ಎಂದು ನೋಡಲು ಬಂದಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ಅಡುಗೆ ಕೆಲಸ ಯಾವುದೇ ಪ್ರಗತಿಯಾಗಿರುವುದಿಲ್ಲ. ಅದಕ್ಕೆ ಯಜಮಾನರು ಭಾಗ್ಯಗೆ ಗದರುತ್ತಾರೆ. ಆಗ ಭಾಗ್ಯ, ಇನ್ನೇನು ಅಡುಗೆ ಕೆಲಸ ಮುಗಿಸುತ್ತೇನೆ, ನಿಮ್ಮ ನಂಬಿಕೆ ಉಳಿಸುತ್ತೇನೆ ಎಂದು ಹೇಳುತ್ತಾಳೆ.
ಇತ್ತ ಮನೆಯನ್ನು ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಲು ಬಂದಿದ್ದಾರೆ. ಅವರು ಬರುವಷ್ಟರಲ್ಲಿ ತಾಂಡವ್ ಕೂಡ ಅಲ್ಲಿಗೆ ಬಂದಿದ್ದಾನೆ. ಬಂದವನೇ ಭಾಗ್ಯ ಎಲ್ಲಿ ಇನ್ನೂ ಕಾಣಿಸುತ್ತಿಲ್ಲ, ಮನೆಯನ್ನು ಹೇಗೆ ಉಳಿಸಿಕೊಳ್ಳುತ್ತಾಳೆ? ಅವಳಿಗೆ ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳುತ್ತಾನೆ. ಅದಕ್ಕೆ ಧರ್ಮರಾಜ್ ಅವನಿಗೆ ಗದರುತ್ತಾನೆ.
ಇತ್ತ ಒಬ್ಬಂಟಿಯಾದ ಭಾಗ್ಯ, ಅಡುಗೆ ಕೆಲಸ ಮಾಡಲು ಇನ್ನಿಲ್ಲದ ಶ್ರಮ ಪಡುತ್ತಿರಬೇಕಾದರೆ, ಅವಳ ಗೆಳತಿಯರು ಎಲ್ಲರೂ ಅಲ್ಲಿಗೆ ಬರುತ್ತಾಳೆ. ಅವರನ್ನು ಕಂಡು ಭಾಗ್ಯಗೆ ಮತ್ತಷ್ಟು ಬಲ ಬಂದಂತಾಗುತ್ತದೆ. ಜತೆಗೆ, ಹುಮ್ಮಸ್ಸಿನಿಂದ ಅವಳು ಕೆಲಸ ಶುರುಮಾಡುತ್ತಾಳೆ. ಅವಳ ಗೆಳತಿಯರು ಎಲ್ಲರೂ ಒಂದೊಂದು ಕೆಲಸ ಹಂಚಿಕೊಂಡು, ಭಾಗ್ಯಗೆ ಸಾಥ್ ನೀಡುತ್ತಾರೆ, ಅವರ ಬೆಂಬಲದಿಂದ ಭಾಗ್ಯ ಭರ್ಜರಿ ಅಡುಗೆ ತಯಾರಿಯಲ್ಲಿ ತೊಡಗಿದ್ದಾಳೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಮಾರ್ಚ್ 5ರ ಸಂಚಿಕೆ ಕೊನೆಯಾಗಿದೆ. ಭಾಗ್ಯ ಹೇಗೆ ಕೊಟ್ಟ ಅಡುಗೆ ಕೆಲಸ ಮಾಡಿ ಪೂರೈಸುತ್ತಾಳೆ ಮತ್ತು ಮನೆಯನ್ನು ಉಳಿಸಿಕೊಳ್ಳುತ್ತಾಳೆ ಎಂದು ಕಾದುನೋಡಬೇಕಿದೆ.