ಶಿಕ್ಷಣ ಕ್ಷೇತ್ರದ ಪ್ರಮುಖ ಸ್ಟಾರ್ಟಪ್ ಕಂಪನಿ ಬೈಜೂಸ್ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿವಾದ, ಸಂಕಷ್ಟಕ್ಕೆ ಸಿಲುಕಿರುವ ಈ ಕಂಪನಿ ತನ್ನ ಉದ್ಯೋಗಿಗಳಿಗೆ ವೇತನವನ್ನು ಪಾವತಿ ಮಾಡಿರಲಿಲ್ಲ. ಆದರೆ ಇದೀಗ ತಮ್ಮ ಮನೆಯನ್ನೇ ಅಡವಿಟ್ಟು ಸಂಬಳ ನೀಡುವ ಮೂಲಕ ಭಾರೀ ಸುದ್ದಿಯಾಗಿದೆ.
ಹೌದು. ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ (Byju’s Founder Byju Raveendran), ತಮ್ಮ ಬೆಂಗಳೂರಿನ ಮನೆಯನ್ನೇ ಅಡವಿಟ್ಟು ಸೋಮವಾರ ಒಂದು ಸಾವಿರ ಸಿಬ್ಬಂದಿಗೆ ಬಾಕಿ ವೇತನ ಪಾವತಿ ಮಾಡಿದ್ದಾರೆ ಎಂಬ ಸಂಗತಿಯೊಂದು ಇದೀಗ ಬಯಲಾಗಿದೆ.
ಬೈಜು ರವೀಂದ್ರನ್ ಅವರ ಕುಟುಂಬವು ಬೆಂಗಳೂರಿನಲ್ಲಿ ಎರಡು ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಒಂದು ಇದೆ. ಇವುಗಳನ್ನು ಅಡವಿಟ್ಟು ಸುಮಾರು 100 ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಸಾಲದಿಂದ ತಮ್ಮ ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ
ಸೋಮವಾರದಂದು ಮಾತೃ ಸಂಸ್ಥೆಯಾದ ಥಿಂಕ್ & ಲರ್ನ್ ಪ್ರೈವೇಟ್ನ 15,000 ಉದ್ಯೋಗಿಗಳಿಗೆ ಸಂಬಳ (Employees Salary) ಪಾವತಿಸಲು ಸ್ಟಾರ್ಟಪ್ ತನ್ನಲ್ಲಿರುವ ಹಣವನ್ನು ಬಳಸಿಕೊಂಡಿದ್ದಾರೆ. ಇನ್ನು ಕಡಿಮೆಯಾದ ಮೊತ್ತಕ್ಕೆ ಈ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಿಬ್ಬಂದಿಯ ಸಂಬಳ ವಿಳಂಬಕ್ಕೆ ಏಕಾಏಕಿ ಉಂಟಾದ ತಾಂತ್ರಿಕ ದೋಷವೆಂದು ಬೈಜೂಸ್ ಕಾರಣ ನೀಡಿತ್ತು. ಅಲ್ಲದೆ ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಸ್ಪಷ್ಟನೆ ನೀಡಿತ್ತು. ಡಿಸೆಂಬರ್ 4ರ ಸೋಮವಾರದೊಳಗೆ ಸಂತ್ರಸ್ತ ಉದ್ಯೋಗಿಗಳ ವೇತನವನ್ನು ಅವರ ಖಾತೆಗಳಿಗೆ ಜಮೆ ಮಾಡುವ ಭರವಸೆಯನ್ನು ನೀಡಿತ್ತು. ಅಂತೆಯೇ ಇದೀಗ ರವೀಂದ್ರನ್ ಅವರು ತಮ್ಮ ಮನೆಯನ್ನೇ ಅಡವಿಟ್ಟು ಉದ್ಯೋಗಿಗಳ ವೇತನ ಪಾವತಿ ಮಾಡಿದ್ದಾರೆ.