ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.. ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಕೆಂಚನಾಲ ಗ್ರಾಮದ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅದರಷ್ಟಕ್ಕೆ ಮಲಗಿದ್ದ ನಾಯಿಯ ಮೇಲೆ ಆಟೋ ಚಾಲಕ ಕಲ್ಲು ಎತ್ತು ಹಾಕಿ ಕೊಂದು ಆಟೋದಲ್ಲಿ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ.
ಈ ಸಂಬಂಧ ಮಾಜಿ ಕೇಂದ್ರ ಸಚಿವೆ ಹಾಗೂ ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮೇನಕಾ ಗಾಂಧಿ ಮಧ್ಯ ಪ್ರವೇಶಿಸಿ ಕ್ರೂರ ಸ್ವಭಾವದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೆಂಚನಾಲ ಗ್ರಾಮದ ಆಟೋ ಚಾಲಕ ವಾಜೀದ್ ಎಂದು ಗುರುತಿಸಲಾಗಿದೆ. ಕೆಂಚನಾಲ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅದರಷ್ಟಕ್ಕೆ ಮಲಗಿದ್ದ ನಾಯಿಯ ಮೇಲೆ ಆರೋಪಿ ವಾಜೀದ್ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕುತ್ತಾನೆ. ಆಗ ನಾಯಿ ಕಿರುಚುತ್ತಾ ಅಲ್ಲೇ ಕುಸಿದು ಬೀಳುತ್ತದೆ ಅಷ್ಟಕ್ಕೇ ಸುಮ್ಮನಾಗದ ಆರೋಪಿ ಮತ್ತೊಮ್ಮೆ ಅದೇ ಕಲ್ಲನ್ನು ಎತ್ತಿ ತಲೆ ಮೇಲೆ ಹಾಕಿದ್ದಾನೆ ಇದರಿಂದ ಅರ್ಧ ಜೀವವಾದ ನಾಯಿ ಅಲ್ಲೇ ನರಳಾಡುತ್ತಿರುತ್ತದೆ ಅಲ್ಲಿಂದ ಸ್ವಲ್ಪ ದೂರಕ್ಕೆ ಹೋದ ಆರೋಪಿ ಮತ್ತೊಮ್ಮೆ ಹಿಂದಿರುಗಿ ಬಂದು ಇನ್ನಷ್ಟೂ ಕ್ರೂರವಾಗಿ ಅದೇ ಕಲ್ಲನ್ನು ಮತ್ತೇ ನಾಯಿಯ ತಲೆ ಮೇಲೆ ಹಾಕಿದ ರಭಸಕ್ಕೆ ನಾಯಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಕೊನೆಗೆ ಆ ನಾಯಿಯನ್ನು ತನ್ನ ಆಟೋ ಹಿಂಬದಿಗೆ ಕಟ್ಟಿ ರಸ್ತೆಯ ಮೇಲೆ ಅತೀ ಅಮಾನುಷವಾಗಿ ಎಳೆದೊಯ್ದಿದ್ದಾನೆ. ಈ ಘಟನೆ ನಡೆಯುವಾಗ ಅಲ್ಲಿದ್ದ ಸ್ಥಳೀಯ ಯುವಕನೊಬ್ಬ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದಾನೆ.
ಪತ್ನಿ, ಅತ್ತೆಯ ಶೀಲದ ಮೇಲೆ ಶಂಕೆ: ತಲ್ವಾರ್ನಿಂದ ಅಟ್ಯಾಕ್ ಮಾಡಿದ ಪಾಪಿ ಅರೆಸ್ಟ್!
ಈ ಸಂಬಂಧಿಸಿದ ವಿಡಿಯೋ ಹಾಗೂ ಮಾಹಿತಿಯನ್ನು ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮೇನಕಾ ಸಂಜಯ್ ಗಾಂಧಿ ಹಾಗೂ ಪ್ರಾಣಿ ದಯಾ ಸಂಘದವರ ಮೇಲ್ ಐಡಿಗೆ ಯುವಕನ ಮೊಬೈಲ್ ನಿಂದಲೇ ಸಂದೇಶ ಕಳುಹಿಸಿದ್ದಾನೆ. ಸಂದೇಶ ಕಳುಹಿಸಿ ಕೇವಲ 45 ನಿಮಿಷಗಳಲ್ಲಿ ಈ ಮೇಲ್ ನಲ್ಲಿ ಸ್ಪಂದಿಸಿದ ಮಾಜಿ ಸಚಿವೆ ಮೇನಕಾ ಗಾಂಧಿ ರವರು ಯುವಕನಿಗೆ ಕೂಡಲೇ ಸ್ಥಳೀಯ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಸೂಚಿಸಿದ್ದು, ಈ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಹಾಗೂ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ ರವರಿಗೆ ಮಾಹಿತಿ ತಿಳಿಸಿದ್ದಾರೆ.
ಮೇನಕಾ ಗಾಂಧಿರವರ ಕರೆ ಬರುತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಪ್ರಾಣಿ ದಯಾ ಸಂಘದವರು ಈ ಬಗ್ಗೆ ಪಶು ವೈದ್ಯಾಧಿಕಾರಿ ಕಡೆಯಿಂದ ಪಟ್ಟಣದ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ಸಲ್ಲಿಕೆಯಾಗಿ 15 ನಿಮಿಷಗಳಲ್ಲಿ ಆರೋಪಿ ಆಟೋ ಚಾಲಕ ವಾಜೀದ್ ನನ್ನು ಪಿಎಸ್ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.