ಉಡುಪಿ:– ವಿಜಯೇಂದ್ರ ಆಯ್ಕೆಯ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ತಿಳಿಯಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪಕ್ಷದ ಹೈಕಮಾಂಡ್ ಬಹಳ ಸಮರ್ಥ, ಯುವಕ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದೆ, ರಾಜ್ಯ ಬಿಜೆಪಿಯ ಇಡೀ ತಂಡವೇ ವಿಜಯೇಂದ್ರ ಜೊತೆ ಒಟ್ಟಾಗಿ ನಿಂತು ಕೆಲಸ ಮಾಡಲಿದೆ, ಮುಂದಿನ ಚುನಾವಣೆಯಲ್ಲಿ ಅದರ ಫಲಿತಾಂಶ ಹೊರಬೀಳಲಿದೆ ಎಂದರು.
ಮೋದಿ, ಅಮಿತ್ ಶಾ, ನಡ್ದಾ , ಬಿ.ಎಲ್. ಸಂತೋಷ್ ಎಲ್ಲರೂ ಒಮ್ಮತದಿಂದ ಈ ಆಯ್ಕೆ ಮಾಡಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದವರು. ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ಕೊಡಲಾಗಿದೆ ಎಂದರು.
ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಶ್ರೀ ರಾಮುಲು, ಸಿ.ಟಿ. ರವಿಗೆ ಬೇಸರ ಇಲ್ಲ, ಅವರೂ ಎಲ್ಲರೂ ಜೊತೆಯಾಗಿ ಪಕ್ಷ ಸಂಘಟನೆಯ ಕೆಲಸವನ್ನು ಮಾಡುತ್ತಾರೆ. ಎಲ್ಲ ಸಮಾಜವನ್ನು ಒಟ್ಟುಗೂಡಿಸಿಕೊಂಡು ಒಂದು ರಾಜಕೀಯ ಪಕ್ಷವನ್ನು ಕಟ್ಟಲಾಗುತ್ತದೆ ಎಂದ ಅವರು, ಸರ್ವವ್ಯಾಪಿ ಸರ್ವಸ್ಪರ್ಶಿ ಸಮುದಾಯ ಗಮನಲ್ಲಿಟ್ಟು ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದರು.