ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದು, ತುಂಬು ಗರ್ಭಿಣಿಯಾಗಿದ್ದ ಮಹಿಳೆ ಮೃತಪಟ್ಟ ಬಳಿಕವೂ ವೈದ್ಯರು ಹೆರಿಗೆ ಮಾಡಿಸಿ ಮಗುವನ್ನು ರಕ್ಷಿಸಿದ ಘಟನೆ ನಡೆದಿದೆ.
ವೈದ್ಯರು ಮೃತ ಗರ್ಭಿಣಿಯ ಹೆರಿಗೆ ಮಾಡಿಸಿ 1.4 ಕೆಜಿ ತೂಕದ ಮಗುವನ್ನು ಹೊರತೆಗೆದಿದ್ದರು. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮಗುವನ್ನು ರಾಫಾ ಆಸ್ಪತ್ರೆಯಲ್ಲಿ ಇನ್ಕ್ಯುಬೇಟರ್ನಲ್ಲಿ ಮತ್ತೊಂದು ಶಿಶುವಿನ ಜೊತೆಗೆ ಇರಿಸಲಾಯಿತು. ದಾಳಿಯಲ್ಲಿ ಮೃತಪಟ್ಟ ಮಗುವಿನ ಸಹೋದರಿ ತನ್ನ ತಂಗಿಗೆ ರೂಹ್ ಎಂದು ನಾಮಕರಣ ಮಾಡಲು ಬಯಸಿದ್ದಳು ಎಂದು ಮಗುವಿನ ಚಿಕ್ಕಪ್ಪ ಹೇಳಿದ್ದಾರೆ.
ಮಗು ಮೂರ್ನಾಲ್ಕು ವಾರಗಳ ಕಾಲ ಆಸ್ಪತ್ರೆಯಲ್ಲಿಯೇ ಇರುತ್ತದೆ, ಅದಾದ ನಂತರ ಮಗುವನ್ನು ಎಲ್ಲಿಗೆ ಕಳುಹಿಸಬೇಕು ಎಂದು ನಾವು ನೋಡುತ್ತೇವೆ ಎಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಗಾಜಾ ಪಟ್ಟಿಯಾದ್ಯಂತ ಇಸ್ರೇಲಿ ಸೇನಾ ದಾಳಿಗಳು ನಡೆದಿವೆ, 48 ಪ್ಯಾಲೆಸ್ತೀನಿಯರನ್ನು ಕೊಂದು 79 ಮಂದಿ ಗಾಯಗೊಳಿಸಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ ಗಾಜಾದ ಆಸ್ಪತ್ರೆಯೊಂದರಲ್ಲಿ 200ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ಇಸ್ರೇಲ್ ಆರು ತಿಂಗಳಿಗಿಂತ ಹೆಚ್ಚು ಕಾಲ ಗಾಜಾದ ಮೇಲೆ ನಿರಂತರ ದಾಳಿ ನಡೆಸಿತ್ತು. ಏಪ್ರಿಲ್ 7ರಂದು ಇಸ್ರೇಲಿ ಮಿಲಿಟರಿ ತನ್ನ ಸೇನೆಯನ್ನು ಹಿಂಪಡೆದಿದೆ. ಬಳಿಕ ಎಲ್ಲೆಡೆ ರಕ್ಷಣಾ ಸಿಬ್ಬಂದಿಗಳು ಜನರನ್ನು ಹುಡುಕುವ ಪ್ರಯತ್ನವನ್ನು ಮುಂದುವರೆಸಿದ್ದಾರೆ, ಆಗ 180ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ.