ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಾವಿನ ಸುದ್ದಿ ಹರಡಿಸಿ ಅಭಿಮಾನಿಗಳಿಗೆ ಶಾಕ್ ನೀಡಿ ಬಳಿಕ ಎಲ್ಲರಿಂದಲೂ ಬೈಸಿಕೊಂಡಿದ್ದ ನಟಿ ಕಂ ಮಾಡೆಲ್ ಪೂನಂ ಪಾಂಡೆ ಪರವಾಗಿ ನಟಿಯ ಡಿಜಿಟಲ್ ಟೀಮ್ ಕ್ಷಮೆಯಾಚಿಸಿದೆ. ಪೂನಂ ಅವರ ಉದ್ದೇಶ ಒಳ್ಳೆಯದಾಗಿತ್ತು. ಆದರೆ, ಆಯ್ಕೆ ಮಾಡಿಕೊಂಡ ಕ್ರಮಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ಟೀಮ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಸತ್ತಂತೆ ಸುದ್ದಿ ಹರಡಿಸಿದ್ದರು. ಪೂನಂ ಸಾವಿನ ಸುದ್ದಿ ಕೇಳಿ ಅನೇಕರು ವಿಷಾದ ವ್ಯಕ್ತ ಪಡಿಸಿದ್ದು ಬಳಿಕ ಆಕೆ ನಾಟಕವಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ನಟಿಯ ಮೇಲೆ F.I.R ದಾಖಲಾಗಿದೆ.
ಪ್ರಕರಣದ ಕುರಿತಂತೆ ಪೂನಂ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಔಷಧ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ನಟಿ , ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ಧಾರ ಮಾಡಿದ್ದು. ನೀವು ಟೀಕೆಗಳನ್ನು ಮಾಡುತ್ತಿದ್ದೀರಿ. ಆದರೆ, ನಾನು ಮಾಡಿದ್ದರ ಹಿಂದಿನ ಪರಿಣಾಮವನ್ನೂ ನೀವು ಗಮನಿಸಬೇಕು ಎಂದು ಪೂನಂ ಬರೆದುಕೊಂಡಿದ್ದಾರೆ.