ಬೆಂಗಳೂರು : ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಏರೋ ಇಂಡಿಯಾ ಒಂದು ನಿರ್ಣಾಯಕ ವೇದಿಕೆ ಎಂದು ಬಣ್ಣಿಸಿದರು. ಬೆಂಗಳೂರಿನಲ್ಲಿ ಏರ್ ಶೋ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಸರ್ಕಾರದ ಸದೃಢ, ಸಮರ್ಥ ಭಾರತ, ಸುರಕ್ಷಿತ ಮತ್ತು ಸ್ವಾವಲಂಬಿ ಭಾರತದ ದೂರದೃಷ್ಟಿಯನ್ನು ಮುಂದೆ ಕೊಂಡೊಯ್ಯುತ್ತದೆ. “ಏರೋ ಇಂಡಿಯಾ ನವ ಭಾರತದ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬನೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇದು ಭಾರತದ ರಕ್ಷಣಾ ಸಿದ್ಧತೆಗೆ ನಿರ್ಣಾಯಕ ಮಾತ್ರವಲ್ಲ, ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ರೂಪಿಸುತ್ತದೆ. ನಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಸಾಮಾನ್ಯ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಯೋಗವನ್ನು ವೃದ್ಧಿಸುವುದು, ಆಳವಾದ ಸಹಕಾರ ಮತ್ತು ಹಂಚಿಕೆಯ ಪ್ರಗತಿಯನ್ನು ಬೆಳೆಸುವುದು ನಮ್ಮ ಗುರಿಯಾಗಿದೆ. ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರದರ್ಶನ ಮಾತ್ರವಲ್ಲ, ನಮ್ಮ ಯುವಕರಿಗೆ ಸ್ಫೂರ್ತಿಯ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ, ವೈಜ್ಞಾನಿಕ ಮನೋಧರ್ಮ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸುತ್ತದೆ ಎಂದರು.
ಒಟ್ಟು 42,000 ಚದರ ಮೀಟರ್ ವಿಸ್ತೀರ್ಣದಲ್ಲಿ ಮತ್ತು 150 ವಿದೇಶಿ ಕಂಪನಿಗಳು ಸೇರಿದಂತೆ 900 ಕ್ಕೂ ಅಧಿಕ ಪ್ರದರ್ಶಕರ ಭಾಗವಹಿಸುವಿಕೆಯೊಂದಿಗೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವು ಈವರೆಗಿನ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನವಾಗಲಿದೆ. 90 ಕ್ಕೂ ಅಧಿಕ ದೇಶಗಳ ಪಾಲ್ಗೊಳ್ಳುವಿಕೆಯು ಭಾರತದ ವೈಮಾನಿಕ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ ಬೆಳೆಯುತ್ತಿರುವ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಕ್ಷಣಾ ಮಂತ್ರಿಗಳು ಅಥವಾ ಸುಮಾರು 30 ದೇಶಗಳ ಪ್ರತಿನಿಧಿಗಳು ಆಗಮಿಸಿದ್ದಾರೆ. 43 ದೇಶಗಳ ವಾಯುಪಡೆಯ ಮುಖ್ಯಸ್ಥರು ಮತ್ತು ಕಾರ್ಯದರ್ಶಿಗಳ ಉಪಸ್ಥಿತಿಯು – ಭಾರತಕ್ಕೆ ಮಾತ್ರವಲ್ಲ, ಇಡೀ ಅಂತಾರಾಷ್ಟ್ರೀಯ ರಕ್ಷಣಾ ಸಮುದಾಯಕ್ಕೆ ಈ ಕಾರ್ಯಕ್ರಮದ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ಮತ್ತುವೈಮಾನಿಕ ವಲಯದ ಪರಿವರ್ತನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ರಕ್ಷಣಾ ಸಚಿವರು, ಇಂದು ಭಾರತವು ದೇಶದೊಳಗೆ ಪ್ರಮುಖ ವೇದಿಕೆಗಳು ಮತ್ತು ಉಪಕರಣಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಮರ್ಥವಾಗಿದೆ. ಇದು ದೇಶದೊಳಗೆ ವಿಶಾಲವಾದ ಪೂರೈಕೆ ಸರಣಿಯನ್ನು ಯಶಸ್ವಿಯಾಗಿ ಸ್ಥಾಪಿಸಿದೆ ಎಂದು ಪ್ರತಿಪಾದಿಸಿದರು. “ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂದ್ ಮತ್ತು ಸಿ-295 ಸಾರಿಗೆ ವಿಮಾನಗಳಂತಹ ಸುಧಾರಿತ ವೇದಿಕೆಗಳನ್ನು ಈಗ ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ದೇಶದೊಳಗೆ ತಯಾರಿಸಲು ನಾವು ದೃಢ ಸಂಕಲ್ಪ ಮಾಡಿದ್ದೇವೆ. ಅಗ್ನಿ ಕ್ಷಿಪಣಿ, ಅಸ್ತ್ರ ಕ್ಷಿಪಣಿ ವ್ಯವಸ್ಥೆ ಮತ್ತು ಪಿನಾಕಾ ಕ್ಷಿಪಣಿ ವ್ಯವಸ್ಥೆಯ ಸುಧಾರಿತ ಪರಿವರ್ತನೆಗಳಿಂದ ಹಿಡಿದು ಅತ್ಯಾಧುನಿಕ ಹೈಪರ್ ಸಾನಿಕ್ ಕ್ಷಿಪಣಿ ವ್ಯವಸ್ಥೆ ಮತ್ತು ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯವರೆಗೆ, ನಾವು ಹಲವು ಯಶೋಗಾಥೆಗಳನ್ನು ಸಾಧಿಸಿದ್ದೇವೆ. ಈ ಸಾಧನೆಗಳು ನಮ್ಮ ರಕ್ಷಣಾ ವಲಯವನ್ನು ಬಲಪಡಿಸುವಲ್ಲಿ ಹಾಗೂ ಭಾರತವನ್ನು ಹೆಚ್ಚು ಸ್ವಾವಲಂಬಿ ಮತ್ತು ಸುರಕ್ಷಿತವಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದರು. ಶಸ್ತ್ರಾಸ್ತ್ರಗಳ ಕಾರ್ಖಾನೆ ಮಂಡಳಿಯ ಕಾರ್ಪೊರೇಟೀಕರಣದ ನಂತರ, ಹೊಸದಾಗಿ ರೂಪುಗೊಂಡ ಕಂಪನಿಗಳು ರಕ್ಷಣಾ ಉತ್ಪಾದನೆಯಲ್ಲಿ ಅಸಾಧಾರಣ ಉತ್ತಮವಾಗಿ ಕಾರ್ಯನಿರ್ವಹಿಸಲು ಆರಂಭಿಸಿವೆ ಎಂದರು.
ಇಂದಿನಿಂದ ಏರೋ ಇಂಡಿಯಾ 2025 ಆರಂಭ : ಈ ಸಲದ ವಿಶೇಷತೆಗಳೇನು ಗೊತ್ತಾ..?
“ಉತ್ತಮವಾಗಿ ಯೋಚಿಸಿದ ಮತ್ತು ಉತ್ತಮವಾಗಿ ಅಭಿವೃದ್ಧಿಪಡಿಸಿದ ಯೋಜನೆಯಡಿಯಲ್ಲಿ, ರಕ್ಷಣಾ ಮತ್ತು ವೈಮಾನಿಕ ಉದ್ಯಮಗಳಲ್ಲಿ ಖಾಸಗಿ ವಲಯವನ್ನು ಸಬಲೀಕರಣಗೊಳಿಸಲು ನಾವು ಸಕ್ರಿಯವಾಗಿ ಕೆಲಸ ಮಾಡಿದ್ದೇವೆ. ಇಂದು ಭಾರತವು ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ರಕ್ಷಣಾ ಉದ್ಯಮವನ್ನು ಹೊಂದಿದ್ದು, ಅದು ತನ್ನನ್ನು ತಾನು ದೃಢವಾಗಿ ಸ್ಥಾಪಿಸಿಕೊಂಡಿದೆ ಮತ್ತು ನಮ್ಮ ರಾಷ್ಟ್ರೀಯ ಭದ್ರತೆಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದೆ” ಎಂದು ಅವರು ಹೇಳಿದರು.
1.27 ಲಕ್ಷ ಕೋಟಿ ರೂ.ಗಳ ದಾಖಲೆಯ ಅಂಕಿ ಅಂಶವನ್ನು ದಾಟಿರುವ ರಕ್ಷಣಾ ಉತ್ಪಾದನೆಯು 2025-26 ರ ಅಂತ್ಯದ ವೇಳೆಗೆ 1.60 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. 21,000 ಕೋಟಿ ರೂ.ಗಳ ದಾಖಲೆಯ ಅಂಕಿ ಅಂಶವನ್ನು ತಲುಪಿದ ರಕ್ಷಣಾ ರಫ್ತು 30,000 ಕೋಟಿ ರೂ.ಗಳ ಗುರಿಯನ್ನು ದಾಟಲಿದೆ ಎಂದು ಹೇಳಿದರು.
ಭಾರತವನ್ನು ಆರ್ಥಿಕ ಸೂಪರ್ ಶಕ್ತಿಯನ್ನಾಗಿ ಮಾಡುವಲ್ಲಿ ರಕ್ಷಣಾ ಕೈಗಾರಿಕಾ ವಲಯವು ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ರಕ್ಷಣಾ ವಲಯದಲ್ಲಿನ ಯಾವುದೇ ಪ್ರಗತಿಯು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವುದಲ್ಲದೆ, ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ರಕ್ಷಣಾ ವಲಯದಲ್ಲಿನ ಅಳವಡಿಸಿಕೊಳ್ಳಲು ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳು ನಾಗರಿಕ ವಲಯದಲ್ಲಿಯೂ ನಾವೀನ್ಯತೆಯನ್ನು ಉತ್ತೇಜಿಸುತ್ತವೆ. ಇದು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಏರೋ ಇಂಡಿಯಾ ಆರ್ಥಿಕ ಶಕ್ತಿಯ ಮಹತ್ವದ ಚಾಲಕ ಶಕ್ತಿ ಎಂದು ಅವರು ಬಣ್ಣಿಸಿದರು. ಇದು ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಏರೋ ಇಂಡಿಯಾವನ್ನು ವೈಮಾನಿಕ ಮತ್ತು ರಕ್ಷಣಾ ವಲಯದಲ್ಲಿ ಜಾಗತಿಕ ನಾಯಕನಾಗುವ ಭಾರತದ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.