ಹುಬ್ಬಳ್ಳಿ: ಉಸ್ತಾದ್ ಝಾಕೀರ್ ಹುಸೇನ್ ಅವರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಭಾರತೀಯ ತಬಲಾ ಸಂಗೀತದ ರಸದೌತಣವನ್ನು ಇಡೀ ವಿಶ್ವಕ್ಕೇ ಹಂಚಿ, ಜಗತ್ತಿನಾದ್ಯಂತ ಮನೆಮಾತಾಗಿದ್ದ ಅವರು, ನಮ್ಮ ಧಾರವಾಡದ ಜೊತೆಗೂ ವಿಶೇಷ ನಂಟು ಹೊಂದಿದ್ದರು ಎಂದು ವಿಧಾನ ಸಭೆಯ ಪ್ರತಿಪಕ್ಷ ನಾಯಕರು, ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು ಹುಬ್ಬಳ್ಳಿ ಮತ್ತು ಧಾರವಾಡಕ್ಕೂ ಹಲವು ಬಾರಿ ಭೇಟಿ ನೀಡಿ, ಪ್ರದರ್ಶನ ನೀಡಿದ್ದ ಉಸ್ತಾದರು, ಇಲ್ಲಿನ ಜನರ ಬಗ್ಗೆ ಮತ್ತು ಈ ನೆಲದ ಸಾಂಸ್ಕೃತಿಕ ರಾಯಭಾರಿಗಳಾದ ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ, ಮಲ್ಲಿಕಾರ್ಜುನ ಮನ್ಸೂರ ಹಾಗೂ ಪಂ.ಭೀಮಸೇನ ಜೋಶಿ ಅವರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದರು.
ಧಾರವಾಡದಲ್ಲಿ ಅವರು ನೀಡಿದ ಮನಮೋಹಕ ತಬಲಾ ವಾದನದ ಪ್ರದರ್ಶನಗಳು ಈಗಲೂ ನನ್ನಲ್ಲಿ ಹಚ್ಚಹಸಿರಾಗಿವೆ. ಸಂಗೀತ ಲೋಕದ ದಂತಕಂಥೆಯಂತಿದ್ದ ತಬಲಾ ಮಾಂತ್ರಿಕರು ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅವರ ಸಂಗೀತ ಸುಧೆ ಮುಂದಿನ ಹಲವು ಪೀಳಿಗೆಯವರೆಗೂ ಜೀವಂತವಾಗಿರುತ್ತದೆ.
ಭಾರತ ಸರಕಾರದಿಂದ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದ ಅವರು, ಮೂರು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಉಸ್ತಾದರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಅವರ ನಿಧನದಿಂದ ಆಗಿರುವ ನೋವು ಭರಿಸುವ ಶಕ್ತಿಯನ್ನು
ಕುಟುಂಬದವರಿಗೆ ಮತ್ತು ವಿಶ್ವದಾದ್ಯಂತ ಇರುವ ಅಭಿಮಾನಿ ಹಾಗೂ ಶಿಷ್ಯ ಬಳಗಕ್ಕೆ
ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೆನೆ ಎಂದಿದ್ದಾರೆ.