ನಾಗಮಂಗಲ:-ಬಿಎಸ್ವೈ ಇದ್ದಾಗ ಬಿಜೆಪಿಗಿದ್ದ ಶಕ್ತಿ ಈಗಂತೂ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಪಕ್ಷದ ಮಡಿಕೆ ಒಡೆದುಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದರೂ ಅದು ನಿಲ್ಲುವುದಿಲ್ಲ ಎಂದರು. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ ದಿನವೇ ಬಿಜೆಪಿ ಮಡಿಕೆ ಒಡೆದುಹೋಗಿದೆ.
ವಿಜಯೇಂದ್ರ ಅವರನ್ನು ಮಂತ್ರಿ ಮಾಡುವಂತೆ ಕೇಳಿದಾಗಲೂ ಮಾಡಲಿಲ್ಲ. ಈಗ ಪರಿಸ್ಥಿತಿಯ ಅರಿವಾಗಿ ಅದಕ್ಕೆ ತೇಪೆ ಹಾಕೋಕೆ ಹೋಗಿದ್ದಾರೆ.
ಏನೇ ಮಾಡಿದರೂ ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಇದ್ದ ಶಕ್ತಿ ಯಾವುದೇ ಕಾರಣಕ್ಕೂ ಈಗ ಬರುವುದಿಲ್ಲ ಎಂದು ಖಡಕ್ಕಾಗಿ ನುಡಿದರು. ಯಡಿಯೂರಪ್ಪ ಇದ್ದ ಸಮಯದಲ್ಲೇ ಬಿಜೆಪಿ115 ಸ್ಥಾನ ದಾಟಲಿಲ್ಲ. ಇವಾಗ ಆ ಶಕ್ತಿ ಬರೋದೆ ಇಲ್ಲ. ವಿಜಯೇಂದ್ರ ಒಳ್ಳೆಯವನು. ಅವನ ಬಗ್ಗೆ ನನಗೆ ಗೌರವವಿದೆ. ವಿಜಯೇಂದ್ರ ನನ್ನ ಸ್ನೇಹಿತ. ಯಡಿಯೂರಪ್ಪನವರ ಬಗ್ಗೆಯೂ ಗೌರವವಿದೆ ಎಂದರು. ಬಿಜೆಪಿಯಿಂದ ವಂಶ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದ್ದೇ ಇದೆ.
ಕುಮಾರಸ್ವಾಮಿ ವಂಶ ರಾಜಕಾರಣ ಮಾಡುತ್ತಿಲ್ಲವೇ. ಬಿಜೆಪಿ ಪಾರ್ಲಿಮೆಂಟ್ ಎಲೆಕ್ಷನ್ನಲ್ಲಿ ರೀಚ್ ಆಗೋಕೆ ಆಗೋಲ್ಲ. ಕುಮಾರಸ್ವಾಮಿ ಅವರನ್ನು ಸೇರಿಸಿಕೊಳ್ಳೋಕೆ ಹೇಗೆ ಒದ್ದಾಡುತ್ತಿದ್ದಾರೆ. ಹಾಗೆಯೇ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ಕುಹಕವಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ಬಿಜೆಪಿ ವಿಶ್ವಾಸ ವಿಚಾರವಾಗಿ, ಈ ಸಲ ಬಿಜೆಪಿ ಸಂಸದರು ರಾಜ್ಯದಲ್ಲಿ 10 ಕ್ಕಿಂತಲು ಕಡಿಮೆ ಆಗುತ್ತಾರೆ ಎಂದು ಖಚಿತವಾಗಿ ನುಡಿದರು.