ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಇದೀಗ ಜಾಮೀನಿನ ಮೂಲಕ ಹೊರ ಬಂದಿದ್ದಾರೆ. ಇದೀಗ ಎರಡು ವಾರಗಳ ಕಾಲ ಮೈಸೂರಿಗೆ ತೆರಳಲು ಅನುಮತಿ ನೀಡುವಂತೆ ದರ್ಶನ್ ಕೋರ್ಟ್ ಮೊರೆ ಹೋಗಿದ್ದು ಇದೀಗ ಕೋರ್ಟ್ ಅನುಮತಿ ನೀಡಿದೆ.
ದರ್ಶನ್ ಪರ ವಕೀಲರು ದರ್ಶನ್ ಮೈಸೂರಿಗೆ ತೆರಳಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ತಿಳಿಸಿತ್ತು. ಗುರುವಾರ ಮಧ್ಯಾಹ್ನ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ನಡೆಸಿದ ಕೋರ್ಟ್ ಡಿಸೆಂಬರ್ 20ರಿಂದ ಜನವರಿ 5ರವರೆಗೆ ಮೈಸೂರಿನಲ್ಲಿ ಇರಲು ದರ್ಶನ್ ಗೆ ಅನುಮತಿ ನೀಡಿದೆ.
ಡಿಸೆಂಬರ್ 13ರಂದು ಹೈಕೋರ್ಟ್ ದರ್ಶನ್ ಸೇರಿ ಏಳು ಮಂದಿಗೆ ಜಾಮೀನು ನೀಡಿತ್ತು. ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಕೂಡದು ಎಂದು ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಮೈಸೂರಿಗೆ ತೆರಳಲು ನಾಲ್ಕು ವಾರಗಳ ಕಾಲ ಅನುಮತಿ ಕೇಳಿದ್ದರು. ದರ್ಶನ್ ಅವರು ಮೈಸೂರಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದಾರೆ. ಆದರೆ ಕೋರ್ಟ್ ಎರಡು ವಾರಗಳ ಕಾಲ ಅವಕಾಶ ನೀಡಿದೆ.