ಕೊಪ್ಪಳ:- ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾನೂ ಪ್ರಯತ್ನ ಮಾಡಿದ್ದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ಕಾರ್ಯಕರ್ತರಲ್ಲಿ ಸಂತಸ ತಂದಿದೆ. ನಮ್ಮ ನಾಯಕರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ಧ ಎಂದರು.
ನಾನು ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಿದ್ದೆ. ಪಕ್ಷಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಕೊಡುಗೆ ಅನನ್ಯ. ನನಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವಿಲ್ಲ ಎಂದೂ ಇದೇ ವೇಳೆ ಸ್ಪಷ್ಟಪಡಿಸಿದರು. ಬಿ.ವೈ.ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿರುವ ಕುರಿತು ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ. ಅದೇನೇ ಇದ್ದರೂ ಪಕ್ಷದ ಪಡಸಾಲೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರಲ್ಲದೆ, ಇನ್ನು ವಿರೋಧ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆಯೂ ಶೀಘ್ರ ನಡೆಯುತ್ತದೆ ಎಂದರು.
ಇನ್ನೂ ಅಧಿಕಾರಕ್ಕೆ ಬಂದ ಕೇವಲ ನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಕೋರ್ಟ್ ಆದೇಶಕ್ಕೆ ಮೊದಲೇ ಕಾವೇರಿ ನೀರು ಬಿಟ್ಟು ನಮ್ಮ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ, ಕಾನೂನು ವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದೆ. ಶಿವಮೊಗ್ಗ ಕಲ್ಲು ತೂರಾಟ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನ. ಕೇವಲ ಒಂದು ಸಮುದಾಯವನ್ನು ಓಲೈಸುವ ಮೂಲಕ ಸರ್ಕಾರ ರಾಜಕಾರಣಕ್ಕೆ ಮುಂದಾಗಿದೆ ಎಂದು ಅವರು ಆರೋಪಿಸಿದರು.