ಹುಬ್ಬಳ್ಳಿ: ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದ್ದು, ಮತ್ತೆ ಮಾಡುವುದೇನಿದೆ. ಹಿಂದೂ ರಾಷ್ಟ್ರ ಇರುವ ಕಾರಣ ಕ್ಕಾಗಿಯೇ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳು ಇಲ್ಲಿ ನೆಲೆಸಿವೆ. ಈ ವೈವಿದ್ಯಮಯತೆ ಯನ್ನು ಬೇರಾವ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದರು. ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಮಂತ್ರಾಕ್ಷತೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಹಿಂದೂಸ್ತಾನ ಹಮಾರಾ ಎನ್ನುವ ಘೋಷಣೆ ಇಂದು ನಿನ್ನೆಯದಲ್ಲ. ಇದನ್ನು ಎಲ್ಲರೂ ಒಪ್ಪಿಕೊಂಡಾಗಿದೆ. ಕಾಂಗ್ರೆಸ್, ಬಿಜೆಪಿ ಹುಟ್ಟುವ ಮೊದಲೇ ಎಲ್ಲಾ ಧರ್ಮದವರು ಈ ರಾಷ್ಟ್ರದಲ್ಲಿದ್ದಾರೆ. ಹಿಂದೂರಾಷ್ಟ್ರದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ಎನ್ನುವ ಸಂಕುಚಿತ ಭಾವನೆ ಸರಿಯಲ್ಲ. ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ಈ ರಾಷ್ಟ್ರದ ಪರಿಕಲ್ಪನೆಯಾಗಿದೆ. ಸರ್ವೇ ಜನ ಸುಖಿನೋ ಭವಂತು ಎಂದು ಹೇಳುತ್ತೇವೆಯೆ ಹೊರತು ಹಿಂದೂಗಳಷ್ಟೇ ಸುಖವಾಗಿರಲಿ ಎಂದು ಹೇಳುವುದಿಲ್ಲ. ಇದು ಈ ರಾಷ್ಟ್ರದ ಭಾವನೆಯಾಗಿದೆ. ಇದನ್ನು ಪಾಕಿಸ್ತಾನ, ಚೀನಾದಂತಹ ಬೇರಾವ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಸರಕಾರ ಎಚ್ಚರವಹಿಸಬೇಕು: ಸರಕಾರ ತನ್ನ ಕಾರ್ಯವನ್ನು ತಾನು ಮಾಡುತ್ತಿದೆ. ಆದರೆ ಶ್ರೀರಾಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಸರಕಾರ ಈ ರೀತಿ ಮಾಡಬಾರದಿತ್ತು. ಈಗ ಮಾಡುತ್ತಿರುವುದರಿಂದ ಜನರಲ್ಲಿ ಮನಸ್ಸಿನಲ್ಲಿ ಆ ಭಾವನೆ ಮೂಡಲು ಕಾರಣವಾಗಿದೆ. ಸರಕಾರ ಈ ಬಗ್ಗೆ ಸ್ವಲ್ಪ ಎಚ್ಚರವಹಿಸಬೇಕು ಎಂದು ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ಕುರಿತು ಕೇಳಿದ ಪ್ರಶ್ನೆಗೆ ಶ್ರೀಗಳು ಉತ್ತರಿಸಿದರು. ಚುನಾವಣೆಗೂ ಶ್ರೀರಾಮ ಮಂದಿರ ಉದ್ಘಾಟನೆಗೂ ಸಂಬಂಧವಿಲ್ಲ. ಇಂತಹ ದೊಡ್ಡ ಮಂದಿರ ನಿರ್ಮಿಸಲು ಐದಾರು ವರ್ಷಗಳು ಬೇಕು. ಹೀಗಿರುವಾಗ ಲೋಕಸಭೆ, ವಿಧಾನಸಭೆ ಸೇರಿದಂತೆ ಹಲವು ಚುನಾವಣೆಗಳು ಬರುತ್ತವೆ. ಹೀಗಾಗಿ ಚುನಾವಣೆ ಹಾಗೂ ಇಂತಹ ಮಾತುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.