ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಕುರಿತು ನ್ಯಾಯಾಂಗ ತನಿಖೆಗೆ ಒಳಪಡಿಸಲು ಹಾಗೂ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಗಸ್ಟ್ 5 ರಂದು ಸೋಮವಾರ ಬೆಂಗಳೂರಿನ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ರಾಜ್ಯ ಪ್ರಗತಿಪರ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಅಧ್ಯಕ್ಷ ಅಪ್ಪಣ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಟ್ಟಡ ಕಾರ್ಮಿಕರ ಮತ್ತು ಅವರ ಕುಟುಂಬದ ಅಭಿವೃದ್ಧಿಯ ಉದ್ದೇಶದಿಂದ ರಾಜ್ಯದಲ್ಲಿ 2006 ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಯಿತು ಆದರೆ ನೈಜ ಫಲಾನುಭವಿಗಳಿಗೆ ಅದರ ಸವಲತ್ತುಗಳು ಸಿಗುತ್ತಿಲ್ಲ ಮಂಡಳಿಗೆ ಇಷ್ಟ ಬಂದಂತೆ ಹಣವನ್ನು ಖರ್ಚು ಮಾಡಿದ್ದಾರೆ 2019ರಿಂದ ಇಲ್ಲಿಯವರೆಗೂ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿಯೇ ಸರಿಸುಮಾರು 4,500 ಕೋಟಿ ಹಣದ ಅಕ್ರಮ ನಡೆದಿದೆ. ಕೆಲ ವಿದ್ಯಾಸಂಸ್ಥೆಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ಸಾವಿರಾರು ಅನರ್ಹರಿಗೆ ಕಾರ್ಮಿಕರ ಕಾರ್ಡ್ ವಿತರಿಸಿ, ಸ್ಕಾಲರ್ ಶಿಪ್ ಪಾವತಿಯಾಗಿದೆ ಮನೆ ನಿರ್ಮಾಣದ ಹೆಸರಿನಲ್ಲಿ ಅಕ್ರಮವಾಗಿ 400 ಕೋಟಿ ಹಣ ಸ್ಲಂ ಬೋರ್ಡ್ಗೆ ವರ್ಗಾಯಿಸಲಾಗಿದೆ. ಆರೋಗ್ಯ ತಪಾಸಣೆ, ಕಿಟ್ ವಿತರಣೆ, ಅಂಬುಲೆನ್ಸ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಆರೋಗ್ಯಶ್ರೀ ಯೋಜನೆಯಿಂದ ಖಾಸಗಿ ಕಂಪನಿಗೆ ಲಾಭ ಆಗಿದೆಯೇ ಹೊರತು ಕಾರ್ಮಿಕರಿಗೆ ಕಿಂಚಿತ್ತೂ ಅನುಕೂಲವಾಗಿಲ್ಲ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ಹೋರಾಟ ನಡೆಸಿದ್ದರು ಯಾವುದೇ ಪ್ರಯೋಜನವಾಗಲಿಲ್ಲ ಈ ಉದ್ದೇಶದಿಂದ ಸೋಮವಾರ ಸಿಎಂ ಮನೆಗೆ ಮುತ್ತಿಗೆ ಹಾಕಿ ನ್ಯಾಯವನ್ನು ಕೇಳಲು ಹೊರಟಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ಮಾತನಾಡಿ, ಕಾರ್ಮಿಕರ ಕಲ್ಯಾಣ ಮಂಡಳಿಯ ಪೋತ್ಸಾಹ ಹಣವನ್ನೇ ನಂಬಿದ್ದ ಕಟ್ಟಡ ಕಾರ್ಮಿಕರು ಇವತ್ತು ಅವರ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿದೆ ಕೂಡಲೇ ಶೈಕ್ಷಣಿಕ ಸೌಲಭ್ಯಗಳಿಗೆ ಅರ್ಜಿ ಹಾಕಿರುವ ಎಲ್ಲರಿಗೂ ಪೋತ್ಸಾಹಧನ ಬಿಡುಗಡೆ ಮಾಡಬೇಕು ಜಿಲ್ಲೆಯಲ್ಲಿರುವ ಕಾರ್ಮಿಕ ಅಧಿಕಾರಿಗಳಿಗೆ ವಿವಿಧ ಸಂಘಟನೆಗಳ ಮೂಲಕ ಕಾರ್ಮಿಕರನ್ನು ನೋಂದಣಿ ಮಾಡಿಸಲು ಸಲ್ಲಿಸಿರುವ ಅರ್ಜಿಗಳನ್ನು ನೇರವಾಗಿ ಭೇಟಿ ಮಾಡದೇ ತಿರಸ್ಕರಿಸಲಾಗುತ್ತಿದೆ ಪ್ರತಿನಿತ್ಯ ಕಟ್ಟಡ ಕಾರ್ಮಿಕರು ಕೆಲಸದಲ್ಲಿ ತೊಡಗಿರುತ್ತಾರೆ ಇಲಾಖೆಯಿಂದ ಪರಿಶೀಲನೆಗಾಗಿ ಕರೆ ಮಾಡಿದರೆ ಸ್ವೀಕರಿಸಲಿಲ್ಲ ಎಂಬ ಕಾರಣವನ್ನು ಕೊಟ್ಟು ನೈಜ ಫಲಾನುಭವಿಗಳನ್ನು ಈ ಯೋಜನೆಯಿಂದ ಹೊರಗಿಡುವ ಕೆಲಸಗಳು ನಡೆಯುತ್ತಿವೆ ನೈಜ ಫಲಾನುಭವಿಗಳನ್ನು ಗುರಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಎಂ.ವಿಜಯಕೃಷ್ಣ ಮಾತನಾಡಿ ಕಟ್ಟಡ ಕಾರ್ಮಿಕರು ಕೆಲಸದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಗೆ ಕಾರ್ಮಿಕರು ಬಲಿಯಾಗುತ್ತಿದ್ದಾರೆ ಅವರಿಗೆ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಹಿಂದೇಟು ಹಾಕುತ್ತಿದೆ ಜಿಲ್ಲೆಯಲ್ಲಿ ಸಾವಿರಾರು ಬೋಗಸ್ ಕಾರ್ಡುಗಳಿವೆ ಅವುಗಳನ್ನು ಪತ್ತೆ ಹಚ್ಚುವ ಕೆಲಸ ಕಾರ್ಮಿಕ ಇಲಾಖೆ ಮಾಡಬೇಕು ಕೂಡಲೇ ಕಾರ್ಮಿಕ ಸಂಘಟನೆಗಳ ಸಭೆ ಕರೆದು ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಇಲಾಖೆ ಮಾಡಬೇಕು ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶವನ್ನು ಕೂಡಲೇ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಐಸಿಸಿಟಿಯು ಸಂಘಟನೆಯ ಪ್ರಭಾಕರ್ ಮಾತನಾಡಿ ಪಿಂಚಣಿದಾರರಿಗೆ ಪಿಂಚಣಿ ಹಣ ಬಿಡುಗಡೆಗೊಳಿಸಬೇಕು, ಪಿಂಚಣಿಗೆ ಅರ್ಜಿ ಸಲ್ಲಿಸುವ ತಾಂತ್ರಿಕ ತೊಂದರೆ ನಿವಾರಿಸಬೇಕು ಟೆಂಡರ್ ಆಧಾರಿತ ಎಲ್ಲಾ ಖರೀದಿ ವ್ಯವಹಾರಗಳನ್ನು ನಿಲ್ಲಸಬೇಕು ತಾಂತ್ರಿಕ ತೊಂದರೆ ಹಾಗೂ ಸರ್ವರ್ ಸಮಸ್ಯೆ ಬಗೆಹರಿಸುವಂತೆ ಇನ್ನೂ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ನಡೆಯುವ ಸಿಎಂ ಮನೆ ಮತ್ತಿಗೆ ಹೋರಾಟಕ್ಕೆ ಜಿಲ್ಲೆಯಿಂದ 2000 ಕಟ್ಟಡ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರಾದ ವಿ.ಕೃಷ್ಣಮೂರ್ತಿ, ರವಿಕುಮಾರ್, ಭೀಮರಾಜ್, ನವೀನ್, ಪುರುಷೋತ್ತಮ, ಮುರಳಿ ಮುಂತಾದವರು ಇದ್ದರು.