ಬೆಂಗಳೂರು:- ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರು ಹಾಗೂ ಪರಿಷತ್ ಶಾಸಕರಾದ ಟಿಎ ಶರವಣ ಅವರು ತಮ್ಮ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯ ವೈಖರಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಬೇಸರ ಹೊರ ಹಾಕಿದ್ದಾರೆ.
15 ದಿನಗಳು ಮುಂಚಿತವಾಗಿಯೇ ಸಮಿತಿ ಸಭೆ ಕುರಿತು ಮಾಹಿತಿ ನೀಡಿದ್ದರು, ಅಧಿಕಾರಿಗಳು ಬೇಜವಾಬ್ದಾರಿ ತೋರಿ ಸಭೆಗಳನ್ನು ಕಡೆಗಣಿಸುತ್ತಿದ್ದಾರೆ. ಅಲ್ಲದೇ ವಿವಿಧ ಇಲಾಖೆಗಳ ಮುಖ್ಯಸ್ಥರು/ಕಾರ್ಯದರ್ಶಿಗಳು ಸಭೆ ದಿನದಂದು ಹಾಜರಾಗದೇ ಕುಂಟು ನೆಪಗಳನ್ನು ಹೇಳಿ ಗೈರಾಗುತ್ತಿದ್ದಾರೆ. ಹಾಗೂ ನಿಗದಿತ ಸಮಯದೊಳಗೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪತ್ರದ ಮುಖೇನ ಶಾಲಿನಿ ರಜನೀಶ್ ಅವರ ಗಮನಕ್ಕೆ ತಂದಿದ್ದರು.
ಇದೀಗ ಟಿಎ ಶರವಣ ಅವರ ಪತ್ರಕ್ಕೆ ಸ್ಪಂದಿಸಿರುವ ಡಾ. ಶಾಲಿನಿ ರಜನೀಶ್ ಅವರು ಇಲಾಖೆ ಮುಖ್ಯಸ್ಥರಿಗೆ ಎಚ್ಚರಿಗೆ ಕೊಟ್ಟಿದ್ದಾರೆ. ಸಮಿತಿ ಸಭೆಗಳನ್ನು ಲಘುವಾಗಿ ಪರಿಗಣಿಸದೆ, ಆಯಾ ಇಲಾಖೆ ಮುಖ್ಯಸ್ಥರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ಜೊತೆಗೆ ನಿಗದಿಪಡಿಸಿರುವ ದಿನಾಂಕದೊಳಗೆ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ್ದಾರೆ.