ಬೆಂಗಳೂರು:- ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದ್ದು, ಕರ್ನಾಟಕದಾದ್ಯಂತ ಸಂಭ್ರಮ ಮನೆ ಮಾಡಿದೆ.
ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಯಲಿದೆ. ರಾಜ್ಯಾದ್ಯಂತ ಭಕ್ತರು ನಾನಾ ರೀತಿಯಲ್ಲಿ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಬೆಳಕಿನ ಅಲಂಕಾರ
ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಬಿಜೆಪಿ ಕಚೇರಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಬಿಜೆಪಿ ಕಚೇರಿ ಕಂಗೊಳಿಸುತ್ತಿದೆ.
ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ ದೇಗುಲ ಉದ್ಘಾಟಿಸಲಿರುವ ಸಿಎಂ ಸಿದ್ದರಾಮಯ್ಯ
ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ಸೀತಾ ರಾಮ ದೇಗುಲ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿಯಲ್ಲಿರುವ ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ ದೇಗುಲ ಉದ್ಘಾಟನೆ ಮಾಡಲಿದ್ದಾರೆ. ಶ್ರೀರಾಮ ಟ್ರಸ್ಟ್ನಿಂದ ನಿರ್ಮಿಸಲಾಗಿರುವ 32 ಅಡಿ ಎತ್ತರದ ಹನುಮನಮೂರ್ತಿ ಸೇರಿದಂತೆ ದೇವಸ್ಥಾನ ಲೋಕಾರ್ಪಣೆ ಮಾಡಲಿದ್ದಾರೆ. ಇಂದು ಮಧ್ಯಾಹ್ನ 12ರಿಂದ 2 ಗಂಟೆವರೆಗೆ ಮಹಾ ಕುಂಬಾಭಿಷೇಕದಲ್ಲಿ ಭಾಗಿಯಾಗಲಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮೈಸೂರಿನ ರಾಮಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ. ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇನ್ನು ರಾಮಲಲ್ಲಾ ವಿಗ್ರಹದ ಶಿಲೆ ಸಿಕ್ಕಿದ ಮೈಸೂರು ತಾಲ್ಲೂಕು ಹಾರೋಹಳ್ಳಿ ಗ್ರಾಮದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಶಾಸಕ ಜಿ ಟಿ ದೇವೇಗೌಡ ಜಮೀನು ಮಾಲೀಕ ರಾಮದಾಸ್ ಶಿಲೆ ತೆಗೆದ ಶ್ರೀನಿವಾಸ್ ಭಾಗಿಯಾಗಲಿದ್ದಾರೆ.
ರಾಮನ ಬಂಟ ಆಂಜನೇಯ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಇಂದು ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ 500 ಕೆಜಿ ತೂಕ, 9 ಅಡಿ ಎತ್ತರದ ಪಂಚಲೋಹದ ರಾಮನ ಮೂರ್ತಿಯನ್ನು ಇಂದು ಕೊಪ್ಪಳದ ಅಂಜನಾದ್ರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಹುಬ್ಬಳ್ಳಿಗೆ ಬಂತು 12 ಅಡಿ ಉದ್ಧದ ರಾಮನ ಮೂರ್ತಿ. ಹುಬ್ಬಳ್ಳಿಯ ಗವಳಿ ಗಲ್ಲಿಯ ರಾಮ ಭಕ್ತರು 12 ಅಡಿ ಉದ್ಧದ ರಾಮನ ಮೂರ್ತಿ ನಿರ್ಮಾಣ ಮಾಡಿ ಸಾರ್ವಜನಿಕರ ದರ್ಶನಕ್ಕೆ ಇಟ್ಟಿದ್ದಾರೆ. ಸುಮಾರು 1 ಲಕ್ಷ 80 ಸಾವಿರ ಖರ್ಚು ಮಾಡಿ ರಾಮನ ಮೂರ್ತಿ ಮಾಡಲಾಗಿದೆ. ಬೆಳಗಾವಿಯ ಕಲಾವಿದರಿಂದ ರಾಮನ ಮೂರ್ತಿ ನಿರ್ಮಾಣವಾಗಿದೆ. ಗವಳಿ ಗಲ್ಲಿಯ ಭಕ್ತರೆಲ್ಲ ಸೇರಿ ಹಣ ಕೂಡಿಸಿ ರಾಮನ ಮೂರ್ತಿ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ
ವಿಜಯಪುರ ನಗರವೂ ಕೇಸರಿಮಯವಾಗಿದೆ. ಶಿವಾಜಿ ವೃತ್ತ, ಗಾಂಧಿ ಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಕೇಸರಿ ಬಾವುಟ ಕಟ್ಟಿ, ಝಗಮಗಿಸೋ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರ ಮಾದರಿ ಬಳಿ ನೂರಾರು ರಾಮಭಕ್ತರು ದೀಪ ಹಚ್ಚಿ ಸಂಭ್ರಮಿಸಿದ್ದಾರೆ.