ಹಾಸನ : ಮೇಕೆ ಮೇಯಿಸಲು ತೆರಳಿದ್ದ 65 ವರ್ಷದ ವಯಸ್ಸಾದ ಅಜ್ಜಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚನ್ನರಾಯಪಟ್ಟಣ ಪೊಲೀಸರು 53 ಗ್ರಾಮ್ ಚಿನ್ನ ಹಾಗೂ ಎರಡು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮೊಹಮದ್ ಸುಜೀತಾ ಮಾಹಿತಿ ನೀಡಿದರು.
ನಗರದ ನಗರ ಪೋಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಚನ್ನರಾಯಪಟ್ಟಣ ತಾಲೂಕಿನ ಅಡಗೂರು ಗ್ರಾಮದ ಮೃತ ಸುಶೀಲಮ್ಮ ಎಂಬುವವರು ನ.21 ರಂದು ನಾಯಿಗುಂಡಿ ಹಳ್ಳದ ಸಮೀಪ ಶವವಾಗಿ ಪತ್ತೆಯಾಗಿದ್ದರು. ಇವರ ಮಗ ಚನ್ನರಾಯಪಟ್ಟ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೋಲಿಸರು ಇಬ್ಬರು ಆರೋಪಿಗಳಾದ ಅಡುಗೂರು ಗ್ರಾಮದವರಾದ ಕಾರ್ತಿಕ್ ಹಾಗೂ ಸಾಗರ್ ಎಂಬುವವರನ್ನು ಬಂಧಿಸಿದ್ದಾರೆ.
ಬಂದಿತ ಅರೋಪಿಗಳಿಂದ ಒಟ್ಟು 53 ಗ್ರಾಮ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುಶೀಲಮ್ಮ ಜೀವನಾಂಶಕ್ಕಾಗಿ ಮೇಕೆಗಳನ್ನು ಸಾಕಿಕೊಂಡಿದ್ದು, ಪ್ರತಿನಿತ್ಯ ಅವುಗಳನ್ನು ಮೇಯಿಸಲು ಕೆರೆಕೋಡಿ ನಾಯಿಗುಂಡಿ ಹಳ್ಳದ ಕಡೆ ಹೋಗುತ್ತಿದ್ದರು. ನ. 20 ಸಂಜೆ ವೇಳೆಗಾಗಲೇ ಮೇಕೆಗಳು ಮಾತ್ರ ಮನೆಗೆ ಬಂದಿವೆ ಆದರೆ ಸುಶೀಲಮ್ಮ ಮನೆಗೆ ಬಂದಿಲ್ಲ. ಅನುಮಾನಗೊಂಡ ಮಗ ಬಸವರಾಜಾಚಾರಿ ಚನ್ನರಾಯಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ನ.21 ರಂದು ನಾಯಿಗುಂಡಿ ಹಳ್ಳದ ಹತ್ತಿರ ಶವವಾಗಿ ಸಿಕ್ಕಿದ್ದಾರೆ. ಮೃತ ಸುಶೀಲಮ್ಮ ಧರಿಸಿದ್ದ ಚಿನ್ನದ ಓಲೆ, ಕೈಬಳೆ, ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಈ ವೇಳೆ ನಾಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೋಲಿಸರು ಚಿನ್ನದ ಆಭರಣಗಳು ಕಾಣೆಯಾದ ಹಿನ್ನೆಲೆಯಲ್ಲಿ ಕೆಲ ಚಿನ್ನದ ಅಂಗಡಿಗಳಿಗೆ ಪರಿಶೀಲನೆಗೆ ತೆರಳಿದ ವೇಳೆ ಹಂತಕರು ಸಿಕ್ಕಿಬಿದ್ದಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ವೃದ್ದೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿದ್ದ ಘಟನೆಯು ಅರಕಲಗೂಡು ತಾಲೂಕು ಶೆಟ್ಟರಕೊಪ್ಪಲು ಗ್ರಾಮದಲ್ಲಿ ನ.19 ರಂದು ನಡೆದಿದ್ದು, ಹತ್ಯೆಗೈದ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಮೃತ ದುರ್ದೈವಿ ಸರೋಜಮ್ಮ. ಸರೋಜಮ್ಮ ಅವರನ್ನು ನ.19 ರಂದು ಕೊಲೆ ಮಾಡಲಾಗಿತ್ತು. ಮೃತದೇಹದಲ್ಲಿ ಕಿವಿಯಲ್ಲಿದ್ದ ಓಲೆ, ಮಾಟಿ, ಕಾಸು, ಕರಿಮಣಿ ಸಮೇತ ಮಾಂಗಲ್ಯ ಸರ ಕಳವು ಮಾಡಲಾಗಿತ್ತು. ಆರೋಪಿ ಪತ್ತೆಗಾಗಿ ರಚನೆ ಮಾಡಲಾಗಿದ್ದ ವಿಶೇಷ ಪೋಲಿಸರ ತಂಡವು ಹಂತಕನನ್ನು ವಶಪಡಿಸಿಕೊಂಡಿದ್ದಾರೆ. ಅರಕಲಗೂಡು ತಾಲೂಕಿನ ಕಾರೇಹಳ್ಳಿ ಗ್ರಾಮದ ರವಿಕುಮಾರ ಎಂಬಾತ ಬಂಧಿತ ಆರೋಪಿ. ಆರೋಪಿಯಿಂದ 65 ಸಾವಿರ ಬೆಲೆ ಚಿನ್ನಾಭರಣ ಹಾಗೂ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮೊಹಮದ್ ಸುಜೀತ ಮಾಹಿತಿ ನೀಡಿದರು.