ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಹುಲಿಯೊಂದರ ಕಳೆಬರಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ್ಳ ಜಲಾಶಯದ ಹಿನ್ನೀರಿನಲ್ಲಿ ಗಂಡು ಹುಲಿ ಶವ ಪತ್ತೆಯಾಗಿದೆ.
ಅಂಬ್ಲಿಗೊಳ್ಳವಲಯ ವ್ಯಾಪ್ತಿಯ ಆನಂದಪುರ ಹೋಬಳಿ ಬೈರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿರುವ ಹಿನ್ನೀರಿನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. ಹುಲಿಯು 8 ರಿಂದ 10 ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ. ಹಿನ್ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಳೇಬರ ಪತ್ತೆಯಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು, ಗೌತಮಪುರ ಗ್ರಾಮ ಪಂಚಾಯಿತಿ ಸದಸ್ಯರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಬಡ್ಡಿ ದಂಧೆಕೋರರ ಮನೆ ರೇಡ್ ಕೇಸ್ ; ಪೊಲೀಸರು ಸೀಜ್ ಮಾಡಿದ್ದ ಹಣ ಬಡ್ಡಿದಂಧೆಯದ್ದಲ್ಲ
ಹುಲಿಯ ಸಾವಿನ ನಿಖರ ಕಾರಣ ತಿಳಿಯಲು ಹುಲಿಯ ಮೃತ ದೇಹದ ಸ್ಯಾಂಪಲ್ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಮೃತ ದೇಹವನ್ನು ನಿಯಮಾನುಸಾರ ದಹಿಸಲಾಯಿತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.