ತಮಿಳು ನಟ ಅಜಿತ್ ಕಾರು ಮತ್ತೊಮ್ಮೆ ಅಪಘಾತಕ್ಕೆ ಇಡಾಗಿದೆ. ಮುಂಬರುವ ರೇಸ್ ಸ್ಪರ್ಧೆಗೆ ತರಬೇತಿ ಪಡೆಯುವಾಗ ಅಪಘಾತಕ್ಕೀಡಾಗಿದ್ದು, ಭಾರಿ ವೇಗದ ಅಭ್ಯಾಸ ಅವಧಿಯಲ್ಲಿ ಘಟನೆ ಸಂಭವಿಸಿದೆ. ಪರಿಣಾಮ ಕಾರಿಗೆ ತೀವ್ರ ಹಾನಿಯಾಗಿದ್ದು, ಅದೃಷ್ಟವಶಾತ್, ನಟ ಅಜಿತ್ ಕುಮಾರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಎಸ್ಟೋರಿಲ್ ನಲ್ಲಿ ನಡೆಯಲಿರುವ ಬೃಹತ್ ಮೋಟಾರ್ ಸ್ಫೋರ್ಟ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅಜಿತ್ ಕುಮಾರ್ ಪೋರ್ಚುಗಲ್ ಗೆ ಆಗಮಿಸಿದ್ದಾರೆ. ಮುಂಬರುವ ರೇಸ್ ಸ್ಪರ್ಧೆಗಾಗಿ ಅವರು ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಅವರು ಕಾರು ಹಾನಿಗೊಳಗಾದರೂ, ಅವರನ್ನು ತಕ್ಷಣವೇ ರಕ್ಷಿಸಲಾಗಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಈ ಆತಂಕಕಾರಿ ಘಟನೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಜಿತ್ ಕುಮಾರ್, “ಅದೊಂದು ಸಣ್ಣ ಅಪಘಾತ” ಎಂದು ಬಣ್ಣಿಸಿದ್ದಾರೆ. ಎಲ್ಲರೂ ಸುರಕ್ಷಿತ ಹಾಗೂ ಸದೃಢವಾಗಿದ್ದಾರೆ ಎಂದು ಹೇಳಿರುವ ಅವರು, ಅಪಘಾತದ ನಂತರ ತಮಗೆ ಹರಿದು ಬಂದ ಪ್ರೀತಿ ಹಾಗೂ ಬೆಂಬಲದ ಮಹಾಪೂರಕ್ಕೆ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಅಜಿತ್ ಕುಮಾರ್ ನಾಯಕತ್ವದ ‘ವಿದಾಮುಯಾರ್ಚಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿತ್ತು. ನಟನೆಯಲ್ಲದೆ ರೇಸಿಂಗ್ ಕ್ರೀಡೆಯ ಬಗ್ಗೆಯೂ ಅಪಾರ ವ್ಯಾಮೋಹ ಹೊಂದಿದ್ದಾರೆ ಅಜಿತ್ ಕುಮಾರ್.