ಶಿರಸಿ:- ಗ್ಯಾರಂಟಿಯಿಂದ ಭಾರ ಬಿದ್ದಿ, ತೆರಿಗೆ ಹೆಚ್ಚಾಗಬಹುದು ಎಂದು ಸಚಿವ ಎಚ್.ಕೆ. ಪಾಟೀಲ್ ಸುಳಿವು ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗ್ಯಾರಂಟಿ ಯೋಜನೆಯಿಂದ ನಮಗೆ ಭಾರ ಬಿದ್ದಿದೆ. ಚಾಣಾಕ್ಷ ನೀತಿಯಿಂದ ಇದನ್ನು ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಬಜೆಟ್ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು’ ಎಂದರು.
ಲೋಕಸಭೆ ಚುನಾವಣೆ ಹಿನ್ನೆಲೆ ಯಾರು ಅಭ್ಯರ್ಥಿ ಆದರೆ ಸೂಕ್ತ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು. ಉತ್ತರ ಕನ್ನಡದಿಂದ ಆರು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದರು.
ಅಭ್ಯರ್ಥಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಜವಾಬ್ದಾರಿ ನೀಡಿದ್ದಾರೆ. ಈಗಾಗಲೇ ಅಂಕೋಲಾದಲ್ಲಿ ಸಭೆ ನಡೆಸಿ ಸಾಕಷ್ಟು ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದೇನೆ. ಅದರಂತೆ ಈಗ ಶಿರಸಿಯಲ್ಲೂ ಸಭೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದೇನೆ. ಪಕ್ಷದಿಂದ ಆರು ಅಭ್ಯಥಿಗಳು ಆಕಾಂಕ್ಷೆ ಹೊಂದಿದ್ದಾರೆ ಎಂಬುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತಿಳಿಸಿದೆ ಎಂದರು.
ಉತ್ತರಕನ್ನಡ ಪ್ರವಾಸೋದ್ಯಮಕ್ಕೆ ಯೋಗ್ಯ ಜಿಲ್ಲೆ. ಅಭಿವೃದ್ಧಿಯ ಜತೆಯಲ್ಲಿ ಬೇರೆ ರಾಜ್ಯದಂತೆ ಜಿಲ್ಲೆಯ ಸಮುದ್ರ ತೀರವನ್ನು ಸುಂದರವಾಗಿ ರೂಪಿಸಬೇಕಿದೆ. ಪ್ರವಾಸೋದ್ಯಮ ಪ್ರಗತಿಯಾಗಲು ಯಾವುದನ್ನು ಅಭಿವೃದ್ಧಿಪಡಿಸಬೇಕು, ಆಕರ್ಷಿಸಲು ಏನೆಲ್ಲ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಲು ಉತ್ತರಕನ್ನಡ ಪ್ರವಾಸೋದ್ಯಮ ಅಧ್ಯಯನ ಹಾಗೂ ಅಭಿವೃದ್ಧಿ ಸಮಿತಿ ರಚಿಸಲಾಗುತ್ತದೆ. ಪರಿಣಿತರು, ಸ್ಥಳೀಯರನ್ನು ಒಳಗೊಂಡು ಜನವರಿ ಮೊದಲ ವಾರದಲ್ಲಿ ಈ ಸಮಿತಿ ರಚಿಸಲಾಗುತ್ತದೆ ಎಂದು ಸಚಿವ ಪಾಟೀಲ ಹೇಳಿದರು.