ಜೀರಿಗೆ ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಇರುತ್ತದೆ. ವಿಶೇಷ ಫ್ಲೇವರ್ ಹೊಂದಿರುವ ಈ ಜೀರಿಗೆ ಅಡುಗೆಗೆ ಹಾಕಿದರೆ ಮತ್ತಷ್ಟು ರುಚಿ ಕೊಡುತ್ತದೆ. ಇಂತಹ ಜೀರಿಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗಿದ್ದು, ಬನ್ನಿ ಈ ಲೇಖನದಲ್ಲಿ ಇದರ ವಿವಿಧ ಆರೋಗ್ಯ ಪ್ರಯೋಜನಗಳನ್ನು ಕೊಡಲಾಗಿದೆ… ಮುಂದೆ ಓದಿ
ಜೀರ್ಣಕ್ರಿಯೆಗೆ ಸಹಕಾರಿ
ಸರಿಯಾಗಿ ಜೀರ್ಣಕ್ರಿಯೆಯಾಗಲು ಜೀರಿಗೆ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಜೀರಿಗೆಗಳಲ್ಲಿರುವ ಥೈಮೋಲ್ ಸಂಯುಕ್ತ ಮತ್ತು ಇತರ ಪ್ರಮುಖ ತೈಲಗಳು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಅಜೀರ್ಣದಿಂದ ಬಳಲುತ್ತಿದ್ದರೆ, ದಿನಕ್ಕೆ ಮೂರು ಬಾರಿ ಜೀರಿಗೆ ಚಹಾ ಕುಡಿಯಿರಿ. ಜೀರಿಗೆ ಚಹಾ ತಯಾರಿಸುವ ವಿಧಾನ: ಒಂದು ಕಪ್ ನೀರು ತೆಗೆದುಕೊಂಡು, ಅದಕ್ಕೆ ಒಂದು ಟೀಸ್ಪೂನ್ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಆ ನಂತರ ಸೋಸಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡಿ.
ಮಲಬದ್ಧತೆ ನಿವಾರಣೆಗೆ
ಜೀರಿಗೆಯಲ್ಲಿ ಹೆಚ್ಚಿನ ನಾರಿನಂಶವಿರುತ್ತದೆ, ಇದು ಜಠರಗರುಳಿನ ಚಟುವಟಿಕೆ ಹೆಚ್ಚಿಸಿ, ಕಿಣ್ವ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಅದಕ್ಕಾಗಿಯೇ ಜೀರಿಗೆ ಬೀಜಗಳನ್ನು ನೈಸರ್ಗಿಕ ವಿರೇಚಕವಾಗಿ ಬಳಸಲಾಗುತ್ತದೆ. ಜೀರಿಗೆ ತೀವ್ರವಾದ ಜೀರ್ಣಕಾರಿ ಅಸ್ವಸ್ಥತೆಯನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.
ಹೇಗೆ ಸೇವಿಸಬೇಕು?
ಮಲಬದ್ಧತೆ ನಿವಾರಣೆಗಾಗಿ , 1 ಟೀಸ್ಪೂನ್ ಜೀರಿಗೆಯನ್ನು ಕಂದು ಬಣ್ಣ ಬರುವವರೆಗೆ ಹುರಿದು, ಚೆನ್ನಾಗಿ ಪುಡಿಮಾಡಿ. ನಂತರ ಪುಡಿಯನ್ನು ನೀರು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸಿ.
ಶೀತ ಮತ್ತು ಕೆಮ್ಮನ್ನು ತೊಲಗಿಸುತ್ತದೆ
ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ. ಆದ್ದರಿಂದ ಇದು ಶೀತ ಮತ್ತು ಕೆಮ್ಮುಗೆ ಅದ್ಭುತವಾದ ಮನೆಮದ್ದು. ಜೀರಿಗೆಯಲ್ಲಿನ ಸಂಯುಕ್ತಗಳು ಸೋಂಕುಗಳ ವಿರುದ್ಧ ಹೋರಾಡಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಹೇಗೆ ಸೇವಿಸಬೇಕು?
ಒಂದು ಗ್ಲಾಸ್ ನೀರಿಗೆ ಒಂದು ಟೀಸ್ಪೂನ್ ಜೀರಿಗೆ ಸೇರಿಸಿ ಕುದಿಸಿ. ಇದಕ್ಕೆ ಸ್ವಲ್ಪ ಹೆಚ್ಚಿದ ಶುಂಠಿ ಸೇರಿಸಿ, ಮತ್ತೆ ಕುದಿಸಿ, ನಂತರ ಸೋಸಿ ಕುಡಿಯಿರಿ. ದಿನಕ್ಕೆ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿ.
ಗರ್ಭಿಣಿ ಮಹಿಳೆಯರಿಗೆ
ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ಮಲಬದ್ಧತೆ ನಿವಾರಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಜೀರಿಗೆ ಸಹಾಯ ಮಾಡುತ್ತದೆ. ವಾಕರಿಕೆಯಂತಹ ಗರ್ಭಧಾರಣೆಯ ರೋಗಲಕ್ಷಣಗಳನ್ನು ಎದುರಿಸಲು ಜೀರಿಗೆ ಸಹಾಯ ಮಾಡುತ್ತದೆ. ಹೆರಿಗೆ ಸುಸೂತ್ರವಾಗಿ ನಡೆಯಲೆಂದು, ಎದೆ ಹಾಲು ಹೆಚ್ಚಿಸಲು ಜೀರಿಗೆ ಬಳಸಲಾಗುತ್ತದೆ.
ಹೇಗೆ ಸೇವಿಸಬೇಕು?
ಒಂದು ಲೋಟ ಬೆಚ್ಚಗಿನ ಹಾಲನ್ನು ತೆಗೆದುಕೊಂಡು, ಅದಕ್ಕೆ ಅರ್ಧ ಟೀಸ್ಪೂನ್ ಜೀರಿಗೆ ಪುಡಿ, 1 ಟೀಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ. ಪ್ರತಿದಿನ ಕುಡಿಯಿರಿ.
ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ
ಜೀರಿಗೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಮತ್ತು ಸಿ ಇವೆ. ಇವು ಪ್ರಬಲ ಆಂಟಿ ಆಕ್ಸಿಡೆಂಟು ಗಳಾಗಿದ್ದು ದೇಹಕ್ಕೆ ಮಾರಕವಾಗಿರುವ ವಿಷಕಾರಿ ವಸ್ತುಗಳು ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಕಣಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ಜೀರಿಗೆಯಲ್ಲಿ ಅತಿಸೂಕ್ಷಕ್ರಿಮಿ ನಿವಾರಕ ಗುಣಗಳೂ ಇದ್ದು ಸೋಂಕು ಹರಡುವ ಸೂಕ್ಷ್ಮಕ್ರಿಮಿಗಳಿಂದ ರಕ್ಷಣೆ ಒದಗಿಸುತ್ತದೆ. ಜೀರಿಗೆಯನ್ನು ಜೀರ್ಣಿಸಿಕೊಂಡ ಬಳಿಕ ಜೀರ್ಣಾಂಗಗಳಲ್ಲಿ ಮೆಗಲೋಮೈಸಿನ್ ಎಂಬ ಪೋಷಕಾಂಶ ಬಿಡುಗಡೆಯಾಗುತ್ತದೆ.
ಇದು ಅತ್ಯುತ್ತಮ ಪ್ರತಿಜೀವಕ ಗುಣಗಳನ್ನು ಹೊಂದಿದೆ. ವಾಸ್ತವದಲ್ಲಿ, ಈ ಬಗ್ಗೆ ಇನ್ನೂ ಸಂಶೋಧನೆಗಳು ಮುಂದುವರೆ ಯುತ್ತಿದ್ದು ಹೊಸ ಹೊಸ ವಿಷಯಗಳು ಅರಿವಿಗೆ ಬರುತ್ತಿವೆ. ಜೀರಿಗೆಯ ಸೇವನೆಯಿಂದ ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ ಹಾಗೂ ಸೀರಂ ಪ್ರೋಟೀನ್ ಮತ್ತು ಒಟ್ಟಾರೆ ಇಮ್ಯುನೋಗ್ಲೋಬುಲಿನ್ ಮಟ್ಟಗಳು ಹೆಚ್ಚಿರುವುದೂ ಗಮನಕ್ಕೆ ಬಂದಿದೆ.
ನಿದ್ರಾಹೀನತೆ ಎದುರಿಸಲು
ಚೆನ್ನಾಗಿ ನಿದ್ರೆ ಬರದಿದ್ದರೆ ಜೀರಿಗೆ ಸೇವಿಸುವುದು ಸಾಮಾನ್ಯ. ಜೀರಿಗೆಯಲ್ಲಿ ಮೆಲಟೋನಿನ್ ಎಂಬ ಸಂಯುಕ್ತವಿರುತ್ತದೆ. ಇದನ್ನು ಹಿಸುಕಿದ ಬಾಳೆಹಣ್ಣಿನೊಂದಿಗೆ ಸೇವಿಸಿದಾಗ ನಿದ್ರೆಯನ್ನು ಪ್ರೇರೇಪಿಸುವ ರಾಸಾಯನಿಕಗಳ ಉತ್ಪಾದನೆ ಹೆಚ್ಚಿಸುತ್ತದೆ.
ಹೇಗೆ ಸೇವಿಸಬೇಕು?
ಅರ್ಧ ಟೀಸ್ಪೂನ್ ಜೀರಿಗೆ ಪುಡಿಯನ್ನು 1 ಟೀ ಸ್ಪೂನ್ ಹಿಸುಕಿದ ಬಾಳೆಹಣ್ಣಿನೊಂದಿಗೆ ಬೆರೆಸಿ. ಮಲಗುವ ಮೊದಲು ಈ ಪೇಸ್ಟ್ ತಯಾರಿಸಿ. ಇದು ನಿಮಗೆ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ತ್ವಚೆ ಹೊಳೆಯಲು
ಜೇನುತುಪ್ಪ ಮತ್ತು ಜೀರಿಗೆ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುವುದಲ್ಲದೆ, ಮೃದುಗೊಳಿಸುತ್ತದೆ. ಜೇನುತುಪ್ಪವು ಚರ್ಮವು ಹೆಚ್ಚು ಒಣಗದಂತೆ ತಡೆಯುತ್ತದೆ.
ಫೇಸ್ ಪ್ಯಾಕ್ ಮಾಡುವ ವಿಧಾನ
ಈ ಫೇಸ್ ಪ್ಯಾಕ್ ತಯಾರಿಸಲು, ಒಂದರಿಂದ ನಾಲ್ಕು ಟೀಸ್ಪೂನ್ ಅರಿಶಿನ ಪುಡಿ, ಅರ್ಧ ಟೀಸ್ಪೂನ್ ಜೀರಿಗೆ ಪುಡಿ ಮತ್ತು 1 ಟೀಸ್ಪೂನ್ ಜೇನುತುಪ್ಪ ತೆಗೆದುಕೊಂಡು ಮಿಶ್ರಣ ಮಾಡಿ ಪೇಸ್ಟ್ ಮಾಡಿಟ್ಟುಕೊಳ್ಳಿ. ನಂತರ ಮುಖಕ್ಕೆ ಹಚ್ಚಿ, 10 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಹಚ್ಚಿ. ಮುಖವನ್ನು ತೊಳೆದ ನಂತರ ಸ್ವಲ್ಪ ಜೊಜೊಬಾ ಎಣ್ಣೆ ಹಚ್ಚಿ.
ಉದ್ದ ಮತ್ತು ಹೊಳೆಯುವ ಕೂದಲಿಗೆ
ಕೂದಲು ಉದ್ದವಾಗಿ, ದಟ್ಟವಾಗಿ, ಹೊಳೆಯುವಂತೆ ಮಾಡಲು ಜೀರಿಗೆ ಸಹಾಯ ಮಾಡುತ್ತದೆ.
ಹೇರ್ ಪ್ಯಾಕ್ ವಿಧಾನ:
ಈ ಹೇರ್ ಪ್ಯಾಕ್ ತಯಾರಿಸಲು, 150-200 ಮಿಲಿ ನೀರು (3/4 ಗಾಜು), 1 ಟೀಸ್ಪೂನ್ ಜೀರಿಗೆ ಪುಡಿ ಮತ್ತು 1 ಮೊಟ್ಟೆಯ ಹಳದಿ ಲೋಳೆ ತೆಗೆದುಕೊಳ್ಳಿ. ನಂತರ ಎಲ್ಲವನ್ನೂ ಒಟ್ಟಿಗೆ ಬೆರೆಸಿ ನಯವಾದ ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ. ನೀವಿದನ್ನು ವಾರಕ್ಕೊಮ್ಮೆ ಅಥವಾ ಪ್ರತಿ ಎರಡು ವಾರಗಳಿಗೊಮ್ಮೆ ಮಾಡಬಹುದು.