ಕಬ್ಬು ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಇಲ್ಲಿನ ರೈತರು ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ಸಕ್ಕರೆ ಕಾರ್ಖಾನೆಗಳು, ಬೆಲ್ಲತಯಾರಿಸುವ ಆಲೆಮನೆಗಳು ಹೆಚ್ಚಾಗಿಯೇ ಇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಲೆಮನೆಗಳು ನಾನಾ ಕಾರಣಗಳಿಂದಾಗಿ ನಶಿಸುವ ಹಂತಕ್ಕೆ ತಲುಪುತ್ತಿವೆ. ಕಳೆದ ವರ್ಷ ಅಲ್ಪ ಪ್ರಮಾಣದಲ್ಲಿ ನಾಲೆಗೆ ನೀರು ಹರಿಸಿದ ಹಿನ್ನೆಲೆಯಲ್ಲಿ ರೈತರು ಸ್ವಲ್ಪಮಟ್ಟಿಗೆ ಕಬ್ಬು ಬೆಳೆದಿದ್ದರು.
ಬೆಳೆದಿರುವ ಕಬ್ಬು ಡಿಸೆಂಬರ್ ಅಂತ್ಯದವರೆಗೆ ಬಹುತೇಕ ಕಟಾವು ಪೂರ್ಣಗೊಂಡಿರುವುದರಿಂದ ಕಬ್ಬಿನ ಡಿಮ್ಯಾಂಡ್ ಹೆಚ್ಚಾಗಿದೆ. ಜತೆಗೆ ಈ ವರ್ಷ ನಾಲೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ರೈತರು ಕಬ್ಬು ಬೆಳೆ ಬೆಳೆದಿಲ್ಲ, ಹಿಂದೆ ಬೆಳೆದಿದ್ದ ಕಬ್ಬು ಕಟಾವು ಆದ ಬಳಿಕ ನೀರಿನ ಕೊರತೆಯಿಂದಾಗಿ ಕಬ್ಬು ಬೇಸಾಯ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.
ಆಲೆಮನೆಯಲ್ಲಿ ಕಬ್ಬು ನುರಿಸಿ ಬೆಲ್ಲ ತಯಾರಿಸುವಷ್ಟರಲ್ಲಿ ಕ್ವಿಂಟಾಲ್ ಬೆಲ್ಲಕ್ಕೆ 3700-3800 ರವರೆಗೆ ವೆಚ್ಚ ತಗುಲುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಬೆಲ್ಲದ ಬೆಲೆ ದಿನೇ ದಿನೆ ಏರಿಳಿಕೆಯಾಗುತ್ತಿದ್ದು, ಪ್ರತಿ ಕ್ವಿಂಟಾಲ್ ಬೆಲ್ಲಕ್ಕೆ 3600, 3800, 4000, 4200 ರೂ. ವರೆಗೂ ತರಾವರಿಯಾಗಿ ದರ ನಿಗದಿಯಾಗುತ್ತಿದೆ. ಭತ್ತ, ಸಕ್ಕರೆಗೆ ಸರಕಾರ ನಿರ್ದಿಷ್ಟವಾದ ಬೆಲೆ ನಿಗದಿಪಡಿಸಿದೆ. ಆದರೆ, ಬೆಲ್ಲಕ್ಕೆ ಮಾತ್ರ ನಿರ್ದಿಷ್ಟ ಬೆಲೆ ನಿಗದಿಪಡಿಸಿಲ್ಲ. ಇದರಿಂದಾಗಿಯೇ ಆಲೆಮನೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುತ್ತಿದ್ದಾರೆ. ಹಾಗಾಗಿ ಸರಕಾರ ಬೆಲ್ಲಕ್ಕೆ ನಿರ್ದಿಷ್ಟ ಬೆಲೆ ನಿಗದಿಪಡಿಸಬೇಕು ಎನ್ನುವುದು ಮಾಲೀಕರ ಒತ್ತಾಯವಾಗಿದೆ.