ದರ್ಶನ್ ನನ್ನ ಪ್ರೀತಿಯ ಹಿರಿಯ ಮಗ. ಅಂಬರೀಶ್ ಗೆ ಇದ್ದ ಆ ಒಂದು ಗುಣ ದರ್ಶನ್ ನಲ್ಲೂ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಮೆಚ್ಚುಗೆ ಸೂಚಿಸಿದ್ದಾರೆ.
ದರ್ಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಸಮಾರಂಭದಲ್ಲಿ ಸುಮಲತಾ ಅಂಬರೀಶ್ ಪಾಲ್ಗೊಂಡು ಮಾತನಾಡಿದ್ದಾರೆ.
‘ನನ್ನ ಪ್ರೀತಿಯ ಹಿರಿಯ ಮಗ ದರ್ಶನ್, ನಿನ್ನೆಯಷ್ಟೇ ಹುಟ್ಟು ಆಚರಿಸಿಕೊಂಡಿದ್ದಾರೆ, ಕಾಟೇರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಮಂಡ್ಯದಲ್ಲಿ ಮಾಡಿದ್ದೆವು. ಆಗಲೇ ಹೇಳಿದ್ದೆ ಈ ಸಿನೆಮಾ ದೊಡ್ಡ ಹಿಟ್ ಆಗುತ್ತೆ ಎಂದು, ಅದರ ಸಂಭ್ರಮವೂ ಮಂಡ್ಯದಲ್ಲೇ ಮಾಡ್ತೀವಿ ಅಂದಿದ್ದೆ. ‘ಕಾಟೇರ’ ಸಿನಿಮಾ ಈಗ ದೊಡ್ಡ ಹಿಟ್ ಆಗಿದೆ. ‘ಕಾಟೇರ’ ದರ್ಶನ್ ಅವರನ್ನು ಎಲ್ಲಗೋ ಕರೆದುಕೊಂಡು ಹೋಗಿ ಕೂರಿಸಿದೆ. ಅವರು ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದಾರೆ. ಅದು ಸಣ್ಣ ಸಾಧನೆಯಲ್ಲ’ ಎಂದು ಮೆಚ್ಚುಗೆ ಸೂಚಿಸಿದರು.
‘25 ವರ್ಷಗಳ ಹಿಂದೆ ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ ಮುಹೂರ್ತಕ್ಕೆ ನಾನು ಹಾಗೂ ಅಂಬರೀಶ್ ಒಟ್ಟಿಗೆ ಹೋಗಿದ್ದೆವು. ನಮ್ಮ ಬೆಂಗಳೂರಿನ ಮನೆಯ ಬಳಿಯ ದೇವಾಲಯದಲ್ಲಿ ಮುಹೂರ್ತ ನಡೆದಿತ್ತು. ದರ್ಶನ್ ಆಗಿನ್ನು 22-23 ವರ್ಷದ ಯುವಕ. ಈಗ ನೋಡಿದರೆ 25 ವರ್ಷ ಪೂರೈಸಿದ್ದಾನೆ. ಈಗಲೂ ನನಗೆ ಅವನು 25-27 ವರ್ಷದ ಯುವಕನಂತೆ ಕಾಣುತ್ತಾನೆ. ಅಮ್ಮನಿಗೆ ಮಕ್ಕಳು ಯಾವಾಗಲೂ ಚಿಕ್ಕವರೇ ಆಗಿರುತ್ತಾರೆ’ ಎಂದರು.
ದರ್ಶನ್ ಬದುಕಿನಲ್ಲಿ ಸವಾಲು ಎದುರಿಸಿ ಬೆಳೆದ ವ್ಯಕ್ತಿ. ಶ್ರಮದಿಂದ ಬೆಳೆದು ಅಭಿಮಾನಿಗಳ ಪ್ರೀತಿಗಳಿಸಿದ್ದಾನೆ. ಸಾರ್ವಜನಿಕ ಜೀವನದಲ್ಲಿ ಇರುವವರು ಮಾದರಿಯಾಗ ಬೇಕು. ದರ್ಶನ್ ಕಷ್ಟಪಟ್ಟು ಬೆಳೆದ ರೀತಿ ನಿಮಗೆಲ್ಲರಿಗೂ ಸ್ಪೂರ್ತಿ ಆಗಬೇಕು. ಬರ್ತಡೇ ಆಚರಣೆ ಬದಲು ಬಡವರಿಗೆ ಸಹಾಯ ಮಾಡಲು ದರ್ಶನ್ ಕೋರಿದ್ದರು, ಅವರಿಗೆ ಅದನ್ನೆಲ್ಲ ಮಾಡಲಾಗದೆ ಹಾಗೆ ಮಾಡಿದ್ದಲ್ಲ, ನಿಮಗೂ ಆ ಅಭ್ಯಾಸ ಬರಲಿ ಎಂಬ ಕಾರಣಕ್ಕೆ ಮಾಡಿದ್ದು, ಮಕ್ಕಳ ಯಶಸ್ಸು ತಾಯಿಗೆ ಸಂತೋಷ. ಅಂಬರೀಶ್ ಹೋದ ಮೇಲೆ ನಮ್ಮ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಅಭಿಷೇಕ್ಗೆ ದರ್ಶನ್ ಗೈಡ್ ಮಾಡ್ತಾನೆ, ಅಭಿಷೇಕ್ಗೆ ದರ್ಶನ್ ದೊಡ್ಡ ಅಣ್ಣನಂತೆ ಇದ್ದಾನೆ. ನಾನು ಸಹ ಹೆಚ್ಚು ಹೊಗಳಿದರೆ ನಾಳೆ ಮನೆಗೆ ಬಂದು ಬೈತಾನೆ’ ಎಂದು ತಮಾಷೆಯಾಗಿ ಹೇಳಿದರು.
ಕಳೆದ ಮಂಡ್ಯ ಲೋಕಸಭೆ ಚುನಾವಣೆ ನೆನಪು ಮಾಡಿಕೊಂಡ ಸುಮಲತಾ, ‘ಕಳೆದ ಚುನಾವಣೆ ಸಮಯದಲ್ಲಿ ನನ್ನ ಮನಸ್ಥಿತಿ ಯಾರಿಗೂ ಗೊತ್ತಿರಲಿಲ್ಲ. ಬಹಳ ಗೊಂದಲದಲ್ಲಿದ್ದೆ. ನನ್ನ ಹತ್ತಿರದಲ್ಲಿರುವವರಿಗೆ ಮಾತ್ರವೇ ನನ್ನ ಸಂಕಷ್ಟ ಗೊತ್ತಿತ್ತು. ಆದರೆ ದರ್ಶನ್ ಹಾಗೂ ಯಶ್ ಬಂದರು, ನನ್ನ ಪರವಾಗಿ ಪ್ರಚಾರ ಮಾಡಿದ್ದು ಮಾತ್ರವೇ ಅಲ್ಲದೆ ನನಗೆ ಬೆಂಬಲ ಸಹ ನೀಡಿದರು. ಅದನ್ನು ನಾನು ಇಂದು ನೆನಪಿಸಿಕೊಳ್ಳಲೇ ಬೇಕು’ ಎಂದ ಸುಮಲತಾ, ಕಾರ್ಯಕ್ರಮ ಆಯೋಜನೆ ಮಾಡಿದ ಸಚ್ಚಿದಾನಂದ್ ಬಗ್ಗೆ ಮಾತನಾಡುತ್ತಾ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮಲತಾ ಅವರು ಸಚ್ಚಿದಾನಂದ್ಗೆ ಸ್ಪರ್ಧಿಸಲು ಬಿಡುತ್ತಾರಾ, ಅಭಿಷೇಕ್ಗೆ ಟಿಕೆಟ್ ಕೇಳ್ತಾರಾ ಅಥವಾ ತಾವೇ ಸ್ಪರ್ಧಿಸುತ್ತಾರಾ ಎಂದು ಸುದ್ದಿಗಳು ಹರಿದಾಡಿತ್ತು. ಅಭಿಷೇಕ್ ಅಥವಾ ಸಚ್ಚಿದಾನಂದ್ಗೆ ಟಿಕೆಟ್ ಕೇಳುವ ಅವಕಾಶ ಇದ್ದರೆ ನಾನು ಸಚ್ಚಿಗಾಗಿಯೇ ಕೇಳುತ್ತೇನೆ’ ಎಂದರು.
ನಾವು ನಡೆದು ಬಂದ ದಾರಿ ಯಾವತ್ತು ಮರೆಯಬಾರದು, ಆ ಗುಣ ದರ್ಶನ್ನಲ್ಲಿದೆ, ಎಲ್ಲರನ್ನು ಜೊತೆಗೂಡಿಸಿಕೊಂಡು ಬೆಳೆಸುವ ಗುಣ ದರ್ಶನ್ಗೆ ಇದೆ. ಅಂಬರೀಶ್ ಅವರಲ್ಲಿ ಬಿಟ್ಟರೆ ಆ ಗುಣ ಕಂಡದ್ದು ದರ್ಶನ್ನಲ್ಲಿ ಮಾತ್ರ. ದರ್ಶನ್ ಹೀಗೆ ಸಂತೋಷವಾಗಿ, ನೆಮ್ಮದಿಯಾಗಿ ಜೀವನ ನಡೆಸಿಕೊಂಡು ಹೋಗುತ್ತಿರಬೇಕು ಎಂಬುದು ನನ್ನ ಹಾರೈಕೆ, ನನ್ನ ಜೊತೆ ಅಂಬರೀಶ್ ಇದ್ದಾರೆ, ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ, 5 ವರ್ಷ ನಿಮ್ಮ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕ ಇಟ್ಟು ಅಂಬರೀಶ್ರನ್ನು ಬೀಳ್ಕೊಟ್ಟೆವು, ಸುಮಲತಾ ಕೂಡ ಈ ಮಣ್ಣನ್ನ ಬಿಡಲ್ಲ, ಮಂಡ್ಯವನ್ನ ಎಂದಿಗೂ ಬಿಡೋದಿಲ್ಲ’ ಎಂದು ಭಾವುಕರಾಗಿ ನುಡಿದರು.