ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ (Ind vs Ban) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ (ಸೆ.19) ಆರಂಭವಾಗುತ್ತಿದೆ. ಚೆನ್ನೈನ ಎಂ.ಎ ಚಿದಂಬರಂ @ಚೆಪಾಕ್ ಕ್ರೀಡಾಂಗಣದಲ್ಲಿ ಸರಣಿಯ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. 2023-25ನೇ ಸಾಲಿನ ವಿಶ್ವಟೆಸ್ಟ್ ಚಾಂಪಿಯನ್ಶಿಪ್ (WTC) ಭಾಗವಾಗಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತದ ವೇಗಿಗೆ ಬ್ಯಾಟ್ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ
ಪ್ರಸಕ್ತ ವರ್ಷದ ಆರಂಭದಲ್ಲಿ ಭಾರತವು ಆಡಿದ್ದ ಕೊನೆಯ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿತ್ತು. ಅದಾದ ಬಳಿಕ ಟೆಸ್ಟ್ ಸರಣಿಯಲ್ಲಿ ತಂಡ ಕಣಕ್ಕಿಳಿದಿಲ್ಲ. ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಗೆಲುವು ಸಾಧಿಸಿದ್ದ ಭಾರತ, ಏಕದಿನ ಸರಣಿ ಸೋತು ತೀವ್ರ ಮುಖಭಂಗ ಅನುಭವಿಸಿತ್ತು. ಏಕದಿನ ಸರಣಿ ಸೋತಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ಪಡೆ, ಇದೀಗ ನಜ್ಮುಲ್ ಹೊಸೈನ್ ಶಾಂಟೊ ಬಳಗದ ವಿರುದ್ಧ ತವರಿನ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.
ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ, ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಟೆಸ್ಟ್ ಸರಯಾಗಿದ್ದು ಸವಾಲಿನದ್ದು ಸಹ ಆಗಿದೆ. ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಇದುವರೆಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಹಾಗಂತ, ಬಾಂಗ್ಲಾ ಹುಲಿಗಳನ್ನು ರೋಹಿತ್ ಶರ್ಮಾ ಪಡೆ ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಇತ್ತೀಚೆಗೆ ಬಾಂಗ್ಲಾದೇಶವು ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ತಿಂಗಳ ಆರಂಭದಲ್ಲಿ ಆಡಿದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು ಅವರ ತವರಲ್ಲೇ ಬಗ್ಗು ಬಡಿದು 2-0 ಅಂತರದಲ್ಲಿ ವೈಟ್ ವಾಶ್ ಮಾಡಿತ್ತು. ಅಲ್ಲಿಂದ ಬಾಂಗ್ಲಾ ಆಟಗಾರರು ಭಾರತ ವಿರುದ್ಧವೂ ಸರಣಿ ಗೆಲುವಿನ ಗುರಿಯೊಂದಿಗೆ ಚೆನ್ನೈಗೆ ಆಗಮಿಸಿದ್ದಾರೆ.
ಇಂದು (ಸೆ.19) ಚೆನ್ನೈನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದೆ. 1% ಮಳೆ ಸಾಧ್ಯತೆಯಿದ್ದು, 78%, ಆದ್ರತೆ ಇರಲಿದೆ. 11 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿದುಬಂದಿದೆ.