ದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತದ (Team India) 16 ಸದಸ್ಯರ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಗಾಯದಿಂದ ಚೇತರಿಕೆ ಕಾಣುತ್ತಿರುವ ವೇಗಿ ಮೊಹಮ್ಮದ್ ಶಮಿ ಮತ್ತು ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವಕಾಶ ಪಡೆದಿಲ್ಲ. ಇಶಾನ್ ಕಿಶನ್ ಬದಲಿಗೆ ವಿಕೆಟ್ ಕೀಪರ್ ಆಗಿ ಹೊಸ ಆಟಗಾರನಿಗೆ ಸ್ಥಾನ ನೀಡಲಾಗಿದೆ.
ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಉತ್ತರ ಪ್ರದೇಶದ ಧ್ರುವ್ ಜುರೆಲ್ಗೆ (Dhruv Jurel) ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ಜುರೆಲ್ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದು, ಟೀಂ ಇಂಡಿಯಾದ ಮೂವರು ವಿಕೆಟ್ ಕೀಪರ್ಗಳಲ್ಲಿ ಒಬ್ಬರಾಗಿದ್ದಾರೆ. ಕೆ.ಎಲ್ ರಾಹುಲ್, ಕೆಎಸ್ ಭರತ್ ದಕ್ಷಿಣ ಆಫ್ರಿಕಾ ಸರಣಿಗೂ ವಿಕೆಟ್ ಕೀಪರ್ ಆಗಿದ್ದರು.
22 ವರ್ಷದ ಧ್ರುವ್ ಜುರೆಲ್ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಅಬ್ಬರದ ಇನ್ನಿಂಗ್ಸ್ಗಳನ್ನು ಆಡುವ ಮೂಲಕ ಕ್ರಿಕೆಟ್ನಲ್ಲಿ ಸಂಚಲನ ಸೃಷ್ಠಿಸಿದ್ದರು. ಭಾರತದ 2020ರ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು. ಅಂದು ಭಾರತ ಫೈನಲ್ ತಲುಪಲು ಪ್ರಮುಖ ಪಾತ್ರವಹಿಸಿದ್ದರು. ಬಳಿಕ ತಂಡ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು.
ಜುರೆಲ್ ಫೆಬ್ರವರಿ 2022ರಲ್ಲಿ ಉತ್ತರ ಪ್ರದೇಶ ತಂಡದಿಂದ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಸಿಡಿಸಿದ್ದಾರೆ. ಅವರು ಕಳೆದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ-ಎ ತಂಡದ ಭಾಗವಾಗಿದ್ದರು.
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಆಯಾಸವಾಗಿದೆ. ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿ ಪಡೆಯುವುದಾಗಿ ಹೇಳಿ ದುಬೈನಲ್ಲಿ ಪಾರ್ಟಿಗೆ ಹೋಗಿದ್ದ ಇಶಾನ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ಕಾರಣಕ್ಕೆ ಅಫ್ಘಾನಿಸ್ತಾನ ಟಿ20 ಸರಣಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದಲೂ ಕೈಬಿಡಲಾಗಿದೆ. ಅವರು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು. ಬಳಿಕ ಭರತ್ಗೆ ಅವಕಾಶ ನೀಡಲಾಗಿತ್ತು.