ಬೆಂಗಳೂರು: ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳಿಗೆ ಸ್ಫೋಟಕ ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಸಲ್ಮಾನ್ ಖಾನ್ ಬಂಧಿತ ಉಗ್ರ. ರುವಾಂಡಾ ತನಿಖಾ ಬ್ಯೂರೋ, ಇಂಟರ್ಪೋಲ್ ಮತ್ತು ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಸಹಯೋಗದೊಂದಿಗೆ ಬುಧವಾರ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಬಂಧನ ಮಾಡಲಾಗಿದೆ. ಇಂದು ರುವಾಂಡ ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದಲ್ಲಿ ಸಲ್ಮಾನ್ ಆರೋಪಿಯಾಗಿದ್ದಾನೆ. ಈತ ಉಗ್ರರಿಗೆ ಸ್ಫೋಟಕಗಳನ್ನು ಪೂರೈಸುವ ಮೂಲಕ ದುಷ್ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ.
ಅಂಚೆ ಕಚೇರಿಯಲ್ಲಿ “ಪ್ರೀಮಿಯಂ ಉಳಿತಾಯ ಖಾತೆ” ತೆರೆಯುವುದು ಹೇಗೆ.? ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ
ಪೋಸ್ಕೋ ಕೃತ್ಯ ಎಸಗಿ ಸಲ್ಮಾನ್ ಬೆಂಗಳೂರು ಜೈಲು ಸೇರಿದ್ದ. 2018 ಮತ್ತು 2022 ರ ಜೈಲುವಾಸದ ಅವಧಿಯಲ್ಲಿ ಜಿವಾವಾಧಿ ಶಿಕ್ಷೆಗೆ ಒಳಗಾಗಿದ್ದ ಉಗ್ರ ನಾಸೀರ್ ಸಂಪರ್ಕಕ್ಕೆ ಈತ ಬಂದಿದ್ದ. ಈತನ ಮಾತಿಗೆ ಮರುಳಾಗಿ ಮೂಲಭೂತವಾದ ಕಡೆಗೆ ಆಕರ್ಷಿತನಾಗಿದ್ದ. ಅಷ್ಟೇ ಅಲ್ಲದೇ ಸಹ ಕೈದಿಗಳನ್ನು ಸೆಳೆದು ಅವರನ್ನು ಉಗ್ರರನ್ನಾಗಿ ರೂಪಿಸುತ್ತಿದ್ದ.
ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಉಗ್ರರ ಸಂಪರ್ಕ ಸಾಧಿಸಿ ಅವರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆ ಮಾಡುವ ಮೂಲಕ ಸಹಕಾರ ನೀಡುತ್ತಿದ್ದ. ಭಯೋತ್ಪಾದನಾ ಕೃತ್ಯದಲ್ಲಿ ತನ್ನ ಹೆಸರು ಬೆಳಕಿಗೆ ಬರುತ್ತಿದ್ದಂತೆ ಸಲ್ಮಾನ್ ಭಾರತದಿಂದ ಪರಾರಿಯಾಗಿದ್ದ.
ಕಳೆದ ವರ್ಷದ ಅಕ್ಟೋಬರ್ 25 ರಂದು ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದ ತನಿಖೆಯನ್ನು ಸಿಸಿಬಿಯಿಂದ ಎನ್ಐಎ ವಹಿಸಿಕೊಂಡಿತ್ತು. ಸಲ್ಮಾನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.
ಈ ವರ್ಷ ಆಗಸ್ಟ್ 2 ರಂದು ಎನ್ಐಎ ಕೋರಿಕೆಯ ಮೇರೆಗೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಹಿನ್ನೆಲೆಯಲ್ಲಿ ರುವಾಂಡಾದ ಅಧಿಕಾರಿಗಳು ಸಲ್ಮಾನ್ನನ್ನು ಬಂಧಿಸಿ ಭಾರತೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. 2024 ರಲ್ಲಿ ಇಂಟರ್ಪೋಲ್ ಒಳಗೊಂಡಂತೆ ಸಂಘಟಿತ ಪ್ರಯತ್ನದ ಮೂಲಕ ದೇಶ ಬಿಟ್ಟು ಪರಾರಿಯಾಗಿದ್ದ 26 ಮಂದಿಯನ್ನು ಭಾರತಕ್ಕೆ ತನಿಖಾ ಸಂಸ್ಥೆಗಳು ಕರೆತಂದಿವೆ.