ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿದ ಟ್ರಂಪ್ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಹಲವು ಮಂದಿ ಗೆಲುವಿನ ಪತಾಕೆ ಹಾರಿಸಿದ್ದಾರೆ.
ಈ ಬಾರಿ ನಡೆದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 6 ಜನ ಭಾರತೀಯ ಮೂಲದವರು ಗೆಲುವು ದಾಖಲಿಸಿ, ಹೊಸ ದಾಖಲೆ ಬರೆದಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಒಟ್ಟು ಐವರು ಭಾರತೀಯ ಮೂಲದ ಅಮೆರಿಕನ್ನರು ಗೆದ್ದು ವೈಟ್ಹೌಸ್ ಪ್ರವೇಶಿಸಿದ್ದರು.ಈ ಬಾರಿ ಅದರ ಸಂಖ್ಯೆ ಆರಕ್ಕೆ ಏರಿಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ವರ್ಜೀನಿಯಾದಲ್ಲಿ ಇದೇ ಮೊದಲ ಬಾರಿ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಮ್ ಅವರ ಗೆಲುವು ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪೂರ್ವ ಅಮೆರಿಕಾದಲ್ಲಿ ಇದೇ ಮೊದಲ ಬಾರಿ ಭಾರತೀಯ ಸಮುದಾಯದ ನಾಯಕನೊಬ್ಬ ಗೆಲುವು ದಾಖಲಿಸಿ ಇತಿಹಾಸ ಬರೆದಿದ್ದಾರೆ. ರಿಪಬ್ಲಿಕನ್ ಪಾರ್ಟಿಯ ಮೈಕ್ ಕ್ಲ್ಯಾನ್ಸಿ ವಿರುದ್ಧ ಸುಬ್ರಮಣ್ಯಮ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಈ ಗೆಲುವನ್ನು ವರ್ಜಿನಿಯಾದ ಜನರಿಗೆ ಅರ್ಪಿಸಿರುವ ಸುಬ್ರಮಣ್ಯಮ್ ಇಲ್ಲಿ ಜನರ ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಈ ಜಿಲ್ಲೆ ನನಗೆ ಮನೆಯಿದ್ದಂತೆ. ನಾನು ಇಲ್ಲಿಯೇ ನನ್ನ ಪತ್ನಿ ಮಿರಾಂಡಳನ್ನು ಕೈ ಹಿಡಿದಿದ್ದೇನೆ. ನನ್ನ ಹೆಣ್ಣು ಮಕ್ಕಳು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಿದ್ದಾರೆ. ನಮ್ಮ ಸಮುದಾಯದವರೆಲ್ಲರೂ ನಮ್ಮ ಕುಟುಂಬದ ಹಾಗೆ ಇದ್ದಾರೆ. ವಾಶಿಂಗ್ಟನ್ನಲ್ಲಿ ಈ ಜಿಲ್ಲೆಯನ್ನು ನಾನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ನನಗೆ ಹೆಮ್ಮೆಯಿದೆ ಎಂದಿದ್ದಾರೆ.
ಭಾರತೀಯ ಮೂಲದ ಜನರು ಅಮೇರಿಕಾದ ಚುನಾವಣೆಯಲ್ಲಿ ಮಿಂಚಿದ್ದಾರೆ. ಡೆಮಾಕ್ರಟಿಕ್ ಕಾಂಗ್ರೆಸ್ಮನ್ ರಾಜಾ ಕೃಷ್ಣಮೂರ್ತಿ ಅವರು ಇಲಿನಾಯ್ಸ್ನ 8 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ನಿಂದ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ಗೆದ್ದಿದ್ದಾರೆ. ಅವರು ರಿಪಬ್ಲಿಕನ್ ಚಾಲೆಂಜರ್ ಮಾರ್ಕ್ ರೈಸ್ ಅವರನ್ನು ಸೋಲಿಸಿದ್ದಾರೆ.
2013 ರಿಂದ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಕಾಂಗ್ರೆಸ್ಮನ್ ಅಮಿ ಬೆರಾ ಕ್ಯಾಲಿಫೋರ್ನಿಯಾದ 6 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಅನ್ನು ಪ್ರತಿನಿಧಿಸಿದ್ದಾರೆ. ಆದರೆ, ಅವರ ಫಲಿತಾಂಶ ಇನ್ನೂ ಬಹಿರಂಗವಾಗಿಲ್ಲ. ಕ್ಯಾಲಿಫೋರ್ನಿಯಾದ 17 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ನಲ್ಲಿ ರಿಪಬ್ಲಿಕನ್ ಚಾಲೆಂಜರ್ ಅನಿತಾ ಚೆನ್ ಅವರನ್ನು ಸೋಲಿಸುವ ಮೂಲಕ ಡೆಮಾಕ್ರಟಿಕ್ ಪ್ರತಿನಿಧಿ ರೋ ಖನ್ನಾ ಯುಎಸ್ ಹೌಸ್ನಲ್ಲಿ ಎರಡನೇ ಅವಧಿಗೆ ಗೆದ್ದಿದ್ದಾರೆ.
ಡೆಮಾಕ್ರಟಿಕ್ ಪ್ರತಿನಿಧಿ ಪ್ರಮೀಳಾ ಜಯಪಾಲ್ ಅವರು ಯುಎಸ್ ಹೌಸ್ನಲ್ಲಿ ವಾಷಿಂಗ್ಟನ್ನ 7 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಸ್ಥಾನದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಿಚಿಗನ್ನ 13 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ನಲ್ಲಿ ಭಾರತೀಯ ಅಮೇರಿಕನ್ ಕಾಂಗ್ರೆಸ್ಮನ್ ಥನೇಡರ್ ಮರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ರಿಪಬ್ಲಿಕನ್ ಎದುರಾಳಿ ಮಾರ್ಟೆಲ್ ಬಿವಿಂಗ್ಸ್ ಅವರನ್ನು ಶೇಕಡಾ 35 ಕ್ಕಿಂತ ಹೆಚ್ಚು ಮತಗಳಿಂದ ಸೋಲಿಸಿದರು.