ಕನ್ನಡ ಕಿರುತೆರೆ ಕಾರ್ಮಿಕರು ಸಂಭಾವನೆ ಹೆಚ್ಚಳ, ಕೆಲಸದ ಸಮಯ ಇಳಿಕೆ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ ಕಾಳಿಟ್ಟಿದೆ. ಮೂರನೇ ದಿನವೂ ಶೂಟಿಂಗ್ ನಲ್ಲಿ ಭಾಗಿಯಾಗದೆ ಟಿವಿ ಕಾರ್ಮಿಕರು ಪ್ರತಿಭಟನೆ ನಡೆಸ್ತಿದ್ದಾರೆ.
ಸದ್ಯ ಕಿರುತೆರೆಯಲ್ಲಿ 68 ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಮೂರುದಿನಗಳಿಂದ ಬಹುತೇಕ ಶೂಟಿಂಗ್ ಬಂದ್ ಆಗಿದೆ. ಕೇವಲ ಮೂರು ಸೀರಿಯಲ್ ಗಳ ಶೂಟಿಂಗ್ ನಡೆಯುತ್ತಿದ್ದು, ಉಳಿದ 65 ಧಾರವಾಹಿಗಳ ಶೂಟಿಂಗ್ ಬಂದ್ ಆಗಿದೆ.
ಕಾರ್ಮಿಕರ ಹೋರಾಟಕ್ಕೆ ಎಚ್ಚೆತ್ತ ನಿರ್ಮಾಪಕರು ಕಾರ್ಮಿಕರ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಮೇಕಪ್, ವಸ್ತ್ರಾಲಂಕಾರ, ಲೈಟ್ ಬಾಯ್ಸ್,ಸೆಟ್ ಬಾಯ್ಸ್ , ಸೌಂಡ್, ಹೇರ್ ಸ್ಟೈಲಿಸ್ಟ್ ಯೂನಿಯನ್ ಜೊತೆ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಎಲ್ಲಾ ಯೂನಿಯನ್ ನಿಂದ ನಾಲ್ಕು ಜನರನ್ನ ಕರೆಸಿ ಸಂಧಾನಕ್ಕೆ ಮುಂದಾಗಿರೋ ನಿರ್ಮಾಪಕರು ಈ ಕುರಿತು ಕ್ರಮ ಕೈಗೊಳ್ಳಲಿದ್ದಾರೆ. ಇಂದಿನ ಮಾತುಕತೆಯಲ್ಲಿ ಸಂಧಾನ ಆಗದಿದ್ರೆ ಫ್ರೀಡಂ
ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲು ಟಿವಿ ಕಾರ್ಮಿಕರು ಸಜ್ಜಾಗಿದ್ದಾರೆ.
ಕಿರುತೆರೆ ಕಾರ್ಮಿಕರ ಒಕ್ಕೂಟ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವಿರುದ್ದ ಹೋರಾಟಕ್ಕಿಳಿದಿದ್ದಾರೆ. ಮಳೆಯನ್ನು ಲೆಕ್ಕಿಸದೆ ಕಾರ್ಮಿಕರು ಅಸೋಸಿಯೇಷನ್ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಕಾರ್ಮಿಕರು ಶೂಟಿಂಗ್ ಸಮಯ ಕಡಿಮೆ ಮಾಡುವಂತೆ ಹಾಗೂ ಪೇಮೆಂಟ್ ಹೆಚ್ಚಿಸುವಂತೆ ಮನವಿ ಮಾಡುತ್ತಿದ್ದಾರೆ. ಟೆಲಿವಿಷನ್ ಅಸೋಸಿಯೇಷನ್ ನಲ್ಲಿ ಕೆಲಸ ಮಾಡ್ತಿರುವ 1000ಕ್ಕೂ ಹೆಚ್ಚು ಕಾರ್ಮಿಕರಿದ್ದು ಸದ್ಯ ಅಸೋಷಿಯೇಶನ್ ವಿರುದ್ದ 300ಕ್ಕೂ ಹೆಚ್ಚ ಕಾರ್ಮಿಕರು ಪ್ರತಿಭಟನೆಗಳಿದಿದ್ದಾರೆ.
ಕಾರ್ಮಿಕರ ಹೋರಾಟದ ಹಿನ್ನೆಲೆ ಕಿರುತೆರೆ ನಿರ್ಮಾಪಕರು ಸದ್ಯ ಆತಂಕದಲ್ಲಿದ್ದಾರೆ. ಸೀರಿಯಲ್ ಶೂಟಿಂಗ್ಗೆ ಸಮಸ್ಯೆಯಾಗಿದ್ದು ಇದೇ ರೀತಿ ಮುಂದುವರಿದರೆ ಪ್ರಸಾರಕ್ಕೆ ಸಮಸ್ಯೆಯಾಗುತ್ತದೆ ಎಂಬ ಆತಂಕದಲ್ಲಿದ್ದಾರೆ.