ಕೃಷಿ, ಶಿಕ್ಷಣ ಮತ್ತು ಆರೋಗ್ಯ ಈ ಮೂರು ಕ್ಷೇತ್ರಗಳಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕೋಪಕಾರಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೆ ದೆಹಲಿಯ ತಮ್ಮ ನಿವಾಸದಲ್ಲಿ ನಡೆಸಿದ ಸಂವಾದದಲ್ಲಿ ಅವರು, ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯ ಬಗ್ಗೆ ಕೇಳುತ್ತಿದ್ದೇನೆ. ಆದರೆ ಭಾರತದಲ್ಲಿ ಇದು ಸಂಭವಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಗೆ ಕನಿಷ್ಠ ವೆಚ್ಚದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಸಂಶೋಧನೆಗಾಗಿ ವಿಜ್ಞಾನಿಗಳಿಗೆ ಹಣವನ್ನು ವಿನಿಯೋಗಿಸಲು ಮುಂದೆ ಬರಲಿರುವ ತಮ್ಮ ಹೊಸ ಸರ್ಕಾರವು ವಿಶೇಷವಾಗಿ ಎಲ್ಲಾ ವರ್ಗದ ಹುಡುಗಿಯರಿಗೆ ಲಸಿಕೆಯನ್ನು ನೀಡಲು ಶ್ರಮಿಸುತ್ತದೆ ಎಂದಿದ್ದಾರೆ.
ಸಾರ್ವತ್ರಿಕ ಚುನಾವಣೆಯ ನಂತರ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿರುವ ಮೋದಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಗತ್ಯವಿದೆ, ಭಾರತವು ಈ ನಿಟ್ಟಿನಲ್ಲಿ ಮುನ್ನಡೆಯಲಿದೆ ಎಂದು ಹೇಳಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವಿಷಯದ ಕುರಿತು ಪ್ರತಿಕ್ರಿಯಿಸಿದ ಮೋದಿ, ಇದನ್ನು ಮಾಂತ್ರಿಕ ಸಾಧನವಾಗಿ ಅಥವಾ ಕೆಲವು ಕೆಲಸಗಳನ್ನು ಮಾಡಲು ಜನರ ಬದಲಿಗೆ ಸೋಮಾರಿ ಸಾಧನವಾಗಿ ನೋಡಬಾರದು ಎಂದಿದ್ದಾರೆ.
ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ನನಗೆ ನಂಬಿಕೆಯಿದೆ, ಅದು ಎಲ್ಲರಿಗೂ ಸಮಾನ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನವನ್ನು ಹಳ್ಳಿಗಳಿಗೆ ಕೊಂಡೊಯ್ಯಬೇಕಾಗಿದೆ ಎಂದು ಸಹ ಹೇಳಿದರು. ತಾವು ತಂತ್ರಜ್ಞಾನಕ್ಕೆ ಆಕರ್ಷಿತನಾದರೂ ಕೂಡ ಅದರ ದಾಸನಲ್ಲ. ನಾನು ಪರಿಣಿತನಲ್ಲ ಆದರೆ ತಂತ್ರಜ್ಞಾನದ ಬಗ್ಗೆ ಮಗುವಿನಂತಹ ಕುತೂಹಲವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು, ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಬಗ್ಗೆ ಮಾತನಾಡುತ್ತಾ, ಪ್ರಧಾನ ಮಂತ್ರಿ ಅವರು ಅದರ ಮೇಲೆ ಯಾರೂ ಏಕಸ್ವಾಮ್ಯವನ್ನು ಹೊಂದಬಾರದು. ಅದನ್ನು ಸಾಮಾನ್ಯ ಜನರು ನಡೆಸಬೇಕು ಎಂದು ನಂಬುವವನು ನಾನು ಎಂದು ಮೋದಿ ಹೇಳಿದ್ದಾರೆ.