ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕೆಲ ಗಂಟೆಗಳ ಕಾಲ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಮಂಗಳೂರು-ದಮಾಮ್ ನಡುವಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು ಪರಿಣಾಮ, ಟೇಕಾಫ್ಗೆ ಸಿದ್ಧವಾಗಿದ್ದ ವಿಮಾನದಲ್ಲಿ ಲೈಟ್ ಆಫ್ ಆಯಿತು. ಲೈಟ್ ಆಫ್ ಆಗಿ ಕೆಲ ಸಮಯ ಕತ್ತಲೆಯಲ್ಲಿ ಕುಳಿತ ಪ್ರಯಾಣಿಕರಿಗೆ ಆತಂಕ ಎದುರಾಗಿತ್ತು.
ಹೊರಡಲು ಸಿದ್ದವಾಗಿ ವಿಮಾನವೇರಿ ಕೂತಿದ್ದ ಪ್ರಯಾಣಿಕರನ್ನು ಏರ್ ಪೋರ್ಟ್ ಸಿಬ್ಬಂದಿ ಮತ್ತೆ ಲಾಂಜ್ಗೆ ಕಳುಹಿಸಿದರು. ಆದ್ದರಿಂದ ರಾತ್ರಿಯಿಡೀ ಪ್ರಯಾಣಿಕರು ಲಾಂಜ್ನಲ್ಲಿಯೇ ಪರದಾಡುವಂತಾಯ್ತು. ಬಳಿಕ ಬೆಳಗ್ಗೆ 7.20ಕ್ಕೆ ವಿಮಾನ ದಮಾಮ್ನತ್ತ ಹಾರಾಟ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು, ಜನವರಿ 27 ರಂದು ಸಂಜೆ 7 ಗಂಟೆಗೆ ದಮಾಮ್ಗೆ ಹೊರಡಬೇಕಿದ್ದ IX 885 ವಿಮಾನವು ಇಂದು ಬೆಳಗ್ಗೆ 7.20 ಕ್ಕೆ ಹೊರಟಿತು. ಆ ಪ್ರಯಾಣಕ್ಕೆ ನಿಗದಿಪಡಿಸಲಾದ ಮೂಲ ವಿಮಾನವನ್ನು AOG ಎಂದು ಘೋಷಿಸಿ ಮತ್ತೆ ನಿಂತ ಸ್ಥಿತಿಗೆ ತರಲಾಯಿತು. ರಾತ್ರಿಯ ದಮಾಮ್ ಪ್ರಯಾಣಿಕರನ್ನು ಕರೆದೊಯ್ಯಲು ಬೆಳಗ್ಗೆ ಬಂದ ವಿಮಾನವನ್ನು ಬಳಸಿತು ಎಂದು ತಿಳಿಸಿದ್ದಾರೆ.