ಶರಣ್ ನಟನೆಯ ಕರ್ವ ಖ್ಯಾತಿಯ ನವನೀತ್ ನಿರ್ದೇಶನದ ‘ಛೂ ಮಂತರ್’ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಹೊಸ ವರ್ಷಕ್ಕೆ, ಸಂಕ್ರಾಂತಿ ಸಮೀಪದಲ್ಲಿ ಅಂದರೆ ಜನವರಿ 10ರಂದು ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ ಚಿತ್ರದ ಪ್ರಚಾರ ಶುರುವಾಗಿದೆ. ಸಂಕ್ರಾಂತಿ ವೇಳೆ ತೆಲುಗು, ತಮಿಳಿನ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿದ್ದವು. ಆದರೆ ಕನ್ನಡದಲ್ಲಿ ಯಾವುದೇ ಚಿತ್ರಗಳು ಸಂಕ್ರಾಂತಿ ಸಮಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿಲ್ಲ. ಹಾಗಾಗಿ, ಬಹಳ ವರ್ಷಗಳ ನಂತರ ಚಿತ್ರವೊಂದನ್ನು ಸಂಕ್ರಾಂತಿ ಸಂದರ್ಭದಲ್ಲಿ ನಿರ್ಮಾಪಕ ತರುಣ್ ಶಿವಪ್ಪ ತೆರೆಗೆ ತರಲು ಮುಂದಾಗಿದ್ದಾರೆ.
ಟೀಸರ್ ಬಿಡುಗಡೆ ಹಾಗೂ ಚಿತ್ರದ ದಿನಾಂಕ ಘೋಷಿಸಲು ಆಯೋಜಿಸಲಾಗಿದ್ದ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕ ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದರು. ನಂತರ ಚಿತ್ರತಂಡ ತಮ್ಮಅಭಿಪ್ರಾಯ ಹಂಚಿಕೊಂಡಿತು.
“ಚಿತ್ರತಂಡದ ಪರಿಶ್ರಮದಿಂದ ‘ಛೂ ಮಂತರ್’ ಉತ್ತಮವಾಗಿ ಮೂಡಿ ಬಂದಿದೆ. ಜನವರಿ 10ರಂದು ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದು ನಿರ್ಮಾಪಕ ತರುಣ್ ಶಿವಪ್ಪ ಮನವಿ ಮಾಡಿದರು.
“ಇದೊಂದು ಡಾರ್ಕ್ ಹ್ಯೂಮರ್ ಜಾನರ್ನ ಹಾರರ್ ಸಿನಿಮಾ. ಉತ್ತರಕಾಂಡ, ಶ್ರೀಲಂಕಾ, ಮೈಸೂರು, ಬೆಂಗಳೂರು ಸೇರಿ ಹಲವೆಡೆ 60 ದಿನಗಳ ಚಿತ್ರೀಕರಣ ನಡೆಸಿದ್ದೇವೆ. ಬೆಂಗಳೂರಿನಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಅನೂಪ್ ಛಾಯಾಗ್ರಹಣ ಹಾಗೂ ಶರಣ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ” ಎಂದು ನಿರ್ದೇಶಕ ನವನೀತ್ ಹೇಳಿದರು.
“ತರುಣ್ ಸುಧೀರ್ ಸಿನಿಮಾಗೆ ಓಂಕಾರ ಹಾಕಿದರು. ದರ್ಶನ್ ಶೀರ್ಷಿಕೆ ಕೊಟ್ಟರು. ಅಲ್ಲಿಂದ ಚಿತ್ರದ ಜರ್ನಿ ಆರಂಭವಾಯಿತು. ತರುಣ್ ಹಾಗೂ ಮಾನಸ ತರುಣ್ ನಿರ್ಮಾಣ ಮಾಡಿದ್ದಾರೆ. ಉತ್ತಮ ಕಥಾಹಂದರ ಹೊಂದಿರುವ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ನನ್ನದು ಹಾಗೂ ಚಿತ್ರತಂಡದ್ದು. ಮುಂದೆ ಇದೇ ದಿನಾಂಕದಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡೋಣ ಎನ್ನುವಷ್ಟು ಚಿತ್ರ ಯಶಸ್ವಿಯಾಗಲಿ” ಎಂದು ನಾಯಕ ಶರಣ್ ಹೇಳಿದರು.
“ನಾನು ನಾಯಕನಾಗಿ ನಟಿಸಿದ್ದ ಹಾಗೂ ನನ್ನ ಮತ್ತು ಶರಣ್ ಅವರ ಕಾಂಬಿನೇಶನ್ನಲ್ಲಿ ಮೂಡಿ ಬಂದಿದ್ದ ‘ಉಪಾಧ್ಯಕ್ಷ’ ಕಳೆದ ಜನವರಿಯಲ್ಲಿ ಬಿಡುಗಡೆ ಆಗಿತ್ತು. ಈ ಜನವರಿಯಲ್ಲಿ ನಮ್ಮಿಬ್ಬರ ಕಾಂಬಿನೇಶನ್ನಲ್ಲಿ ಬಂದಿರುವ ಈ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ ಈ ಚಿತ್ರ ನಮ್ಮಿಬ್ಬರ ಹಿಂದಿನ ಚಿತ್ರಗಳಿಗಿಂತ ವಿಭಿನ್ನ” ಎಂದು ನಟ ಚಿಕ್ಕಣ್ಣ ತಿಳಿಸಿದರು.
“ಶರಣ್ ಜೊತೆ ನಟಿಸಬೇಕೆಂಬ ಆಸೆ ಈ ಚಿತ್ರದ ಮೂಲಕ ಈಡೇರಿದೆ” ಎಂದು ನಟಿ ಮೇಘನಾ ಗಾಂವ್ಕರ್ ತಿಳಿಸಿದರು. “ಉತ್ತಮ ತಂಡದೊಂದಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ” ಎಂದು ನಟಿ ಅದಿತಿ ಪ್ರಭುದೇವ ಹೇಳಿದರು.
ಚಿತ್ರದಲ್ಲಿ ಅಭಿನಯಿಸಿರುವ ಪ್ರಭು ಮುಂಡ್ಕರ್, ದಿಲೀಪ್ ರಾಜ್, ಧರ್ಮ, ನರಸಿಂಹ ಜಾಲಹಳ್ಳಿ, ರಂಜನಿ ರಾಘವನ್ ಸಹ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ನಿರಂಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.