ಬೆಂಗಳೂರು: ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಇಂಗ್ಲೆಂಡ್ ತಂಡದ ಆಲ್ ರೌಂಡರ್ ಹಾಗೂ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮುಕ್ತ ಕಂಠದಿಂದ ಪ್ರಶಂಸಿಸಿದ್ದು, 2023ರ ವಿಶ್ವಕಪ್ ಟೂರ್ನಿಯ ಅಂತ್ಯಕ್ಕೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವವರ ಸಾಲಿನಲ್ಲಿ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ, ಪಾಕಿಸ್ತಾನದ ಶಾಹಿನ್ ಶಾ ಅಫ್ರಿದಿ ನಿಂತಿದ್ದರೂ, ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್, ಟೀಮ್ ಇಂಡಿಯಾದ ಹಿರಿಯ ಬೌಲರ್ ಮೊಹಮ್ಮದ್ ಶಮಿಯನ್ನು ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್ ಆಗಿ ಆಯ್ಕೆ ಮಾಡಿದ್ದಾರೆ.
ಮೊಹಮ್ಮದ್ ಶಮಿ ಅವರು ಪ್ರಸಕ್ತ ವಿಶ್ವಕಪ್ ಟೂರ್ನಿಯ ಬೌಲರ್ ಆಗಿದ್ದಾರೆ. ನನ್ನ ಪ್ರಕಾರ ಅವರು ವಿಶ್ವಕಪ್ ಟೂರ್ನಿಯ ಎಲ್ಲ ಪಂದ್ಯಗಳನ್ನು ಆಡುತ್ತಾರೆ ಎಂದು ನನಗೆ ಅನಿಸುತ್ತಿಲ್ಲ.ಆದರೆ ತನಗೆ ಸಿಕ್ಕ ಪ್ರತಿಯೊಂದು ಪಂದ್ಯದಲ್ಲೂ ಅತ್ಯಮೋಘ ಪ್ರದರ್ಶನ ತೋರುವ ಮೂಲಕ ವಿಕೆಟ್ ಪಡೆಯುತ್ತಾರೆ. ಆತ (ಶಮಿ) ಯಾವಾಗಲೂ ವಿಕೆಟ್ ಪಡೆಯಲು ದಾರಿ ಹುಡುಕುತ್ತಾರೆ,” ಎಂದು ಇಂಗ್ಲೆಂಡ್ ತಂಡದ ಆಲ್ ರೌಂಡರ್ ಹೇಳಿದ್ದಾರೆ.
“ನಾನು ಶಮಿ ವಿರುದ್ಧ ಅನೇಕ ಪಂದ್ಯಗಳಲ್ಲಿ ಅವರ ಬೌಲಿಂಗ್ ಅನ್ನು ಎದುರಿಸಿದ್ದೇನೆ. ಆತ ನಿಜಕ್ಕೂ ಅತ್ಯದ್ಬುತ ಬೌಲರ್. ಶ್ರೀಲಂಕಾ ವಿರುದ್ಧದ ಪಂದ್ಯವನ್ನು ನಾವು ವೀಕ್ಷಿಸಿದ್ದೇವೆ. ಶಮಿ ಅತ್ಯಮೋಘ ಬೌಲಿಂಗ್ ಪ್ರದರ್ಶನ ತೋರಿದ್ದಾರೆ,” ಎಂದು ಬೆನ್ ಸ್ಟೋಕ್ಸ್ ಪ್ರಶಂಸಿಸಿದ್ದಾರೆ.