ದೆಹಲಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ದೇಶದ 2ನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ (Arjuna Award) ಸ್ವೀಕರಿಸಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಇದರೊಂದಿಗೆ ಅನೇಕ ಕ್ರೀಡಾತಾರೆಗಳು ಅರ್ಜುನ ಪ್ರಶಸ್ತಿ ಪಡೆದು ಸಂತಸಪಟ್ಟರು.
ಶಮಿ ಸೇರಿದಂತೆ ಇತರ ಕ್ರೀಡಾಪಟುಗಳು ತೋರಿದ್ದ ಅದ್ಭುತ ಪ್ರದರ್ಶನಕ್ಕಾಗಿ 2023ರಲ್ಲಿ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿತ್ತು. ಹಿಂದಿನ 4 ವರ್ಷಗಳ ಅವಧಿಯಲ್ಲಿ ತೋರಿದ ಪ್ರದರ್ಶನ, ನಾಯಕತ್ವದ ಬೆಳವಣಿಗೆ, ಕ್ರೀಡಾ ಮನೋಭಾವ, ಶಿಸ್ತಿನ ಪ್ರಜ್ಞೆ ಈ ಮಾನದಂಡಗಳ ಆಧಾರದದಲ್ಲಿ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು.
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ (World Cup 2023) ಟೂರ್ನಿಯಲ್ಲಿ ಶಮಿ ಅದ್ಭುತ ಸಾಧನೆ ಮಾಡಿದ್ದರು. 7 ಪಂದ್ಯಗಳನ್ನಾಡಿದರೂ 24 ವಿಕೆಟ್ಗಳನ್ನು ಪಡೆಯುವ ಮೂಲಕ 2023ರ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಮೈಲುಗಲ್ಲನ್ನೂ ಸ್ಥಾಪಿಸಿದರು.