ಗ್ವಾಲಿಯರ್: ಅರ್ಷ್ದೀಪ್, ಮಯಾಂಕ್, ವರುಣ್ ಮಾರಕ ಬೌಲಿಂಗ್ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಟೀಂ ಇಂಡಿಯಾ (Team India), ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ
ಇಲ್ಲಿನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ (Bangladesh) 19.5 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಅಲ್ಪಮೊತ್ತದ ಗುರಿ ಪಡೆದ ಭಾರತ ತಂಡ ಕೇವಲ 11.5 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ 132 ರನ್ ಚಚ್ಚಿ ಗೆಲುವಿನ ನಗೆ ಬೀರಿತು.
ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಬ್ಯಾಟರ್ಗಳು ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದರು. ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಮೊದಲ ವಿಕೆಟ್ಗೆ 2 ಓವರ್ಗಳಲ್ಲಿ 25 ರನ್ ಚಚ್ಚಿತ್ತು. ಈ ವೇಳೆ ಅಭಿಷೇಕ್ ಶರ್ಮಾ ರನೌಟ್ಗೆ ತುತ್ತಾಗಿ ನಿರಾಸೆ ಅನುಭವಿಸಿದ್ರು.
ನಂತರ ಸಂಜು ಸ್ಯಾಮ್ಸನ್, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ (Suryakumar Yadav), ಹಾರ್ದಿಕ್ ಪಾಂಡ್ಯ (Hardik Pandya) ಭರ್ಜರಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿ ಗೆಲುವಿನ ಹಾದಿಯನ್ನು ಸುಗಮವಾಗಿಸಿದರು. 243.75 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ 39 ರನ್ (5 ಬೌಂಡರಿ, 2 ಸಿಕ್ಸರ್) ಚಚ್ಚಿದರೆ, ಸೂರ್ಯಕುಮಾರ್ ಯಾದವ್ 14 ಎಸೆತಗಳಲ್ಲಿ 29 ರನ್, ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ 29 ರನ್, ಅಭಿಷೇಕ್ ಶರ್ಮಾ 7 ಎಸೆತಗಳಲ್ಲಿ 16 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿ ಮಿಂಚಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಭಾರತದ ಬೌಲರ್ಗಳ ದಾಳಿಗೆ ಧೂಳಿಪಟವಾಯಿತು. ಮೊದಲ ಓವರ್ನಿಂದಲೇ ಬಾಂಗ್ಲಾ ಪೆವಿಲಿಯನ್ ಪರೇಡ್ ನಡೆಸಿತು. ವೇಗಿ ಅರ್ಷ್ದೀಪ್ ಸಿಂಗ್, ಮಯಾಂಕ್ ಯಾದವ್, ಸ್ಪಿನ್ನರ್ ವರುಣ್ ಚಕ್ರವರ್ತಿ ಬಾಂಗ್ಲಾ ಬ್ಯಾಟರ್ಗಳ ವಿರುದ್ಧ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ನಾಯಕ ಜನ್ಮುಲ್ಲಾ ಹೊಸೈನ್ ಸ್ಯಾಂಟೋ ಹಾಗೂ ಮೆಹಿದಿ ಹಸನ್ ಮಿರಾಜ್ ಹೊರತುಪಡಿಸಿದ್ರೆ, ಉಳಿದ ಆಟಗಾರರು ಸಂಪೂರ್ಣ ಮಕಾಡೆ ಮಲಗಿದರು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ 32 ಎಸೆತಗಳಲ್ಲಿ 35 ರನ್ ಗಳಿಸಿದ್ರೆ, ಸ್ಯಾಂಟೋ 25 ಎಸೆತಗಳಲ್ಲಿ 27 ರನ್ ಬಾರಿಸಿದರು. ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು.
ಇನ್ನೂ ಬಾಂಗ್ಲಾ ಬ್ಯಾಟರ್ಗಳ ವಿರುದ್ಧ ಪ್ರಾಬಲ್ಯ ಮೆರೆದ ಭಾರತದ ಪರ ಅರ್ಷ್ದೀಪ್ ಸಿಂಗ್, ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಮಯಾಂಕ್:
ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ರಾಕೆಟ್ ವೇಗಿ ಮಯಾಂಕ್ ದಾಖಲೆಯ ಪುಟ ತೆರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಪವರ್ ಪ್ಲೇನಲ್ಲಿ ಮೇಡಿನ್ ಓವರ್ ಮಾಡಿ ದಾಖಲೆ ಪುಟ ಸೇರಿದ್ದಾರೆ.