ಪುಣೆ: ಪುಣೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 359 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 245 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಈ ಮೂಲಕ 1983ರ ಬಳಿಕ ಒಂದೇ ವರ್ಷದಲ್ಲಿ 3 ಟೆಸ್ಟ್ ಪಂದ್ಯ ಸೋತ ಅಪಖ್ಯಾತಿ ಪಡೆದಿದೆ. 1969ರಲ್ಲಿ ಒಂದೇ ವರ್ಷದಲ್ಲಿ 4 ಟೆಸ್ಟ್ ಹಾಗೂ 1983ರಲ್ಲಿ 3 ಟೆಸ್ಟ್ ಸೋತಿದ್ದ ಭಾರತ, 2024ರಲ್ಲಿ 3 ಟೆಸ್ಟ್ ಕಳೆದುಕೊಂಡಿದೆ.
301 ರನ್ಗಳ ಮುನ್ನಡೆಯೊಂದಿಗೆ ಮೂರನೇ ದಿನದ ಆಟ ಆರಂಭಿಸಿದ ಕಿವೀಸ್ 2ನೇ ಇನ್ನಿಂಗ್ಸ್ನಲ್ಲಿ 255 ರನ್ ಗಳಿಸಿ, ಭಾರತಕ್ಕೆ 359 ರನ್ಗಳ ಗುರಿ ನೀಡಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟಿದ ಭಾರತ ಕಿವೀಸ್ ಸ್ಪಿನ್ ದಾಳಿಗೆ ಮಕಾಡೆ ಮಲಗಿತು. ಕಿವೀಸ್ ಸ್ಪಿನ್ ಮಾಂತ್ರಿಕ ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್ ಅವರ ದಾಳಿಗೆ ತತ್ತರಿಸಿ ರನ್ ಕದಿಯಲು ತಿಣುಕಾಡಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಇದು ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತು.
ʼPAN CARDʼ ನಲ್ಲಿ ಹೆಸರು, ವಿಳಾಸ ತಪ್ಪಾಗಿದೆಯೇ.? ಮನೆಯಲ್ಲೇ ಕುಳಿತು ಸುಲಭವಾಗಿ ತಿದ್ದುಪಡಿ ಮಾಡಿ
ಭಾರತದ ಪರ ಯಶಸ್ವಿ ಜೈಸ್ವಾಲ್ 77 ರನ್ (65 ಎಸೆತ, 3 ಸಿಕ್ಸರ್, 9 ಬೌಂಡರಿ), ಶುಭಮನ್ ಗಿಲ್ 23 ರನ್, ವಿರಾಟ್ ಕೊಹ್ಲಿ 17 ರನ್, ವಾಷಿಂಗ್ಟನ್ ಸುಂದರ್ 21 ರನ್, ಸರ್ಫರಾಜ್ ಖಾನ್ 9 ರನ್, ರವಿಚಂದ್ರನ್ ಅಶ್ವಿನ್ 18 ರನ್, ನಾಯಕ ರೋಹಿತ್ ಶರ್ಮಾ (Rohit Sharma) 8 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 84 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಆದ್ರೆ ಸಿಕ್ಸರ್ ಸಿಡಿಸುವ ಭರದಲ್ಲಿ ಬೌಂಡರಿ ಲೈನ್ಬಳಿ ಕ್ಯಾಚ್ಗೆ ತುತ್ತಾದರು.
ಮಿಂಚಿದ ಮಿಚೆಲ್
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ವಿರುದ್ಧ 19.3 ಓವರ್ಗಳಲ್ಲಿ 53 ರನ್ ಬಿಟ್ಟುಕೊಟ್ಟು 7 ವಿಕೆಟ್ ಕಬಳಿಸಿದ್ದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 2ನೇ ಇನ್ನಿಂಗ್ಸ್ನಲ್ಲೂ ಭಾರತದ ಬ್ಯಾಟರ್ಗಳ ಮೇಲೆ ಹಿಡಿತ ಸಾಧಿಸಿದರು. 29. ಓವರ್ಗಳಲ್ಲಿ 104 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಅಜಾಝ್ ಪಟೇಲ್ 2 ವಿಕೆಟ್, ಗ್ಲೆನ್ ಫಿಲಿಪ್ಸ್ 1 ವಿಕೆಟ್ ಪಡೆದರು.
2ನೇ ಇನ್ನಿಂಗ್ಸ್ನಲ್ಲಿ ಕಿವೀಸ್ ಸವಾಲಿನ ಮೊತ್ತ:
ದ್ವಿತೀಯ ಇನ್ನಿಂಗ್ಸ್ನಲ್ಲಿ ಆರಂಭಿಕ ಸಂಕಷ್ಟದ ಹೊರತಾಗಿಯೂ ಕಿವೀಸ್ 255 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು. ನಾಯಕ ಲಾಥಮ್ 86 ರನ್ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್ ಯಂಗ್ 23 ರನ್, ಡೆವೋನ್ ಕಾನ್ವೆ 17 ರನ್, ಡೇರಿಲ್ ಮಿಚೆಲ್ 18 ರನ್ ಹಾಗೂ ರಚಿನ್ ರವೀಂದ್ರ 9 ರನ್, ಟಾಮ್ ಬ್ಲಂಡೆಲ್ 41 ರನ್, ಗ್ಲೆನ್ ಫಿಲಿಪ್ಸ್ 48 ರನ್ಗಳ ಕೊಡುಗೆ ನೀಡಿದರು.
ಸುಂದರ್ ಸೂಪರ್:
ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಕಬಳಿಸಿ ಟೀಂ ಇಂಡಿಯಾಕ್ಕೆ ಆಧಾರವಾಗಿದ್ದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 2ನೇ ಇನ್ನಿಂಗ್ಸ್ನಲ್ಲೂ ತಮ್ಮ ಬೌಲಿಂಗ್ ದಾಳಿಯಲ್ಲಿ ಹಿಡಿತ ಸಾಧಿಸಿದರು. 19. ಓವರ್ಗಳಲ್ಲಿ 56 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು, ಒದರೊಂದಿಗೆ ರವೀಂದ್ರ ಜಡೇಜಾ 3 ವಿಕೆಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ನಲ್ಲೂ ಭಾರತ ಕಳಪೆ ಬ್ಯಾಟಿಂಗ್:
ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ದಾಳಿಗೆ ತತ್ತರಿಸಿದ ಭಾರತದ ಬ್ಯಾರ್ಟ್ಗಳು ರನ್ ಕದಿಯಲು ತಿಣುಕಾಡಿದರು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ತಲಾ 30 ರನ್ ಗಳಿಸಿದ್ರೆ ರವೀಂದ್ರ ಜಡೇಜಾ 38 ರನ್ ಗಳಿಸಿದ್ರು. ಇನ್ನುಳಿದಂತೆ ರಿಷಭ್ ಪಂತ್ 18 ರನ್, ಸರ್ಫರಾಜ್ ಖಾನ್ 11 ರನ್, ರವಿಚಂದ್ರನ್ ಅಶ್ವಿನ್ 4 ರನ್, ಆಕಾಶ್ ದೀಪ್ 6 ರನ್ ಗಳಿಸಿದ್ರೆ, ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಶೂನ್ಯ ಸುತ್ತಿದರು.