ಅಹಮದಾಬಾದ್: ಏಷ್ಯಾ ಕಪ್ ಗೆದ್ದ ಬಳಿಕ ಶ್ರೇಷ್ಠ ಲಯ ಕಂಡುಕೊಂಡ ಟೀಮ್ ಇಂಡಿಯಾ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದೆ. ಈ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾರತ ತಂಡದ ಯಶಸ್ಸಿನ ಶ್ರೇಯಸನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಸಲ್ಲಬೇಕು ಎಂದು ಹೇಳಿದ್ದಾರೆ. ಫೈನಲ್ ಪಂದ್ಯಕ್ಕೂ ಹಿಂದಿನ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ತಂಡದ ಯಶಸ್ಸಿನ ಹಿಂದೆ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಪ್ರಭಾವ ವಿವರಿಸಿದ್ದಾರೆ.
“ತಂಡದ ಯಶಸ್ಸಿನ ಹಿಂದ ಕೋಚ್ ರಾಹುಲ್ ದ್ರಾವಿಡ್ ಅವರ ಪಾತ್ರ ಅಪಾರ. ತಂಡದ ಎಲ್ಲ ಆಟಗಾರರಿಗೂ ಸ್ವಾತಂತ್ರ ನೀಡಿದ್ದಾರೆ. ಆಟಗಾರರಿಗೆ ಬೇಕ್ಕಾದ್ದನ್ನು ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನಿಗೆ ಅವರದ್ದೇ ಜವಾಬ್ದಾರಿಯನ್ನು ಅವರು ನೀಡಿದ್ದಾರೆ. ಇದರಿಂದ ಆಟಗಾರರಲ್ಲಿ ಸ್ಪಷ್ಟತೆ ಕಾಣಬಹುದು. ಸದಾ ಆಟಗಾರರ ಬೆಂಬಲಕ್ಕೆ ನಿಲ್ಲುತ್ತಾರೆ. 2022ರ ಟಿ20 ವಿಶ್ವಕಪ್ ಬಳಿಕ ಪ್ರತಿಯೊಬ್ಬ ಆಟಗಾರನಿಗೆ ಬೆಂಬಲ ನೀಡಿದ್ದಾರೆ. ಅವರ ಬಗ್ಗೆ ಹೇಳಲು ಇಷ್ಟು ಸಾಕು,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
“ತಂಡದಲ್ಲಿ ರಾಹುಲ್ ದ್ರಾವಿಡ್ ಅವರ ಉಪಸ್ಥಿತಿಯಿಂದ ಡ್ರೆಸಿಂಗ್ ರೂಮ್ನಲ್ಲಿ ಶಾಂತಿ ನೆಲೆಸಿದೆ. ವಿಶ್ವಕಪ್ನ ಮೊದಲ ಪಂದ್ಯದಿಂದಲೂ ತಂಡದ ಡ್ರೆಸಿಂಗ್ ರೂಮ್ ಅತ್ಯಂತ ಪ್ರಶಾಂತವಾಗಿದೆ. ಒತ್ತಡದ ಪಂದ್ಯಗಳಲ್ಲೂ ನಮ್ಮ ಡ್ರೆಸಿಂಗ್ ರೂಮ್ನಲ್ಲಿ ಆತಂಕ ಮೂಡಿಲ್ಲ,” ಎಂದಿದ್ದಾರೆ.