ರಾಯಪುರ: ಆಸೀಸ್ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) ಯುವಪಡೆ ಅಮೋಘ ಜಯ ಸಾಧಿಸುವ ಜೊತೆಗೆ ಆಸೀಸ್ (Australia) ವಿರುದ್ಧ ಸರಣಿ ಜಯ ತನ್ನದಾಗಿಸಿಕೊಂಡಿತು. ಇದರೊಂದಿಗೆ ಭಾರತ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ (T20I Cricket) ಅತಿಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2006ರಲ್ಲಿ ಟಿ20 ಕ್ರಿಕೆಟ್ ಆರಂಭವಾದಾಗಿನಿಂದ ಭಾರತ ಈವರೆಗೆ ಆಡಿದ 213 ಪಂದ್ಯಗಳಲ್ಲಿ 136 ರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ 226 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿದ್ದ ಪಾಕ್ ತಂಡವನ್ನು ಹಿಂದಿಕ್ಕಿದೆ. ಭಾರತದ ಗೆಲುವಿನ ಪ್ರಮಾಣ 63.84 ಇದೆ.
ಟಿ20 ಕ್ರಿಕೆಟ್ನಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಕೀರ್ತಿ ಪಾಕಿಸ್ತಾನ ತಂಡದ ಹೆಸರಿನಲ್ಲಿತ್ತು. ಆದ್ರೆ ಆಸೀಸ್ ವಿರುದ್ಧ ನಡೆದ ಟಿ20 ಸರಣಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಯುವಪಡೆ 20 ರನ್ಗಳ ಜಯ ಸಾಧಿಸುವ ಮೂಲಕ ಈ ದಾಖಲೆಯನ್ನು ಮುರಿಯಿತು. ಜೊತೆಗೆ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ಗೆದ್ದುಕೊಂಡಿದೆ. ಕೊನೆಯ ಪಂದ್ಯವು ಭಾನುವಾರ (ಡಿ.3) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. 2019ರಲ್ಲಿ ಭಾರತ ತಂಡ ತವರಿನಲ್ಲಿ ಕೊನೆಯ ಬಾರಿ ಸರಣಿ ಟಿ20 ಸರಣಿ ಸೋತಿತ್ತು.
ಭಾರತ ತವರು ನೆಲದಲ್ಲಿ ನಡೆದ ಟಿ20 ಸರಣಿಯಲ್ಲಿ ಈವರೆಗೆ ಆಸ್ಟ್ರೇಲಿಯಾ ಎದುರು ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿರಲಿಲ್ಲ. ಆದ್ರೆ ಪ್ರಸಕ್ತ ಸರಣಿಯಲ್ಲಿ 2 ಮತ್ತು 4ನೇ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿ, ಚೇಸಿಂಗ್ನಲ್ಲಿ ಗೆದ್ದಿರುವುದು ವಿಶೇಷ. ಅಲ್ಲದೇ ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ನಾಯಕತ್ವದಲ್ಲಿ ಗೆದ್ದ ಮೊದಲ ಸರಣಿಯೂ ಇದಾಗಿದೆ.
4 ಪಂದ್ಯಗಳಲ್ಲಿ ಆಸೀಸ್ಗೆ 3ನೇ ಸೋಲು:
5 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 209 ರನ್ಗಳ ಬೃಹತ್ ಮೊತ್ತ ಗಳಿಸಿದರೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ನಿಂದ ಸೋಲನುಭವಿಸಿತು. ಇನ್ನೂ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಂಘಟಿತ ಬ್ಯಾಟಿಂಗ್ ಎದುರು ತಲೆಭಾಗಿತು. 3ನೇ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಅಬ್ಬರದಿಂದ ಆಸೀಸ್ ಗೆಲುವು ಸಾಧಿಸಿ, ಸರಣಿ ಕನಸು ಜೀವಂತವಾಗಿಸಿಕೊಂಡಿತ್ತು. ಆದ್ರೆ ಶುಕ್ರವಾರ ಹೊಸ ಮುಖಗಳಿಗೆ ಮಣೆಹಾಕಿದ ಆಸ್ಟ್ರೇಲಿಯಾ ಸಾಧಾರಣ ಮೊತ್ತ ಗಳಿಸುವುದಕ್ಕೂ ತಿಣುಕಾಡಿತ್ತು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಟೀಂ ಇಂಡಿಯಾ ಎದುರು ಮಂಡಿಯೂರಿತು.