ಬೆಂಗಳೂರು:- ವರ್ಷದೊಳಗೆ ಸಿರಿಧಾನ್ಯ ರಫ್ತು ಹೆಚ್ಚಳದ ಗುರಿ ಹೊಂದಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ವರ್ಷದೊಳಗೆ ಸಿರಿಧಾನ್ಯಗಳ ರಫ್ತು ಪ್ರಮಾಣವನ್ನು ಈಗಿರುವುದಕ್ಕಿಂತ ದುಪ್ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ರಾಜ್ಯದಿಂದ ಪ್ರತಿ ವರ್ಷ ₹36 ಕೋಟಿ ಮೌಲ್ಯದ ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳು ರಫ್ತಾಗುತ್ತಿವೆ. ಸಿರಿಧಾನ್ಯ ಉತ್ಪಾದನೆ ಮತ್ತು ರಫ್ತು ಪ್ರಮಾಣದಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ತರುವುದು ನಮ್ಮ ಗುರಿಯಾಗಿದೆ’ ಎಂದರು.
ರಾಜ್ಯದ ಸಿರಿಧಾನ್ಯಗಳು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳು ಅಮೆರಿಕ, ಆಸ್ಟ್ರೇಲಿಯಾ, ಯುಎಇ, ಕೆನಡಾ, ಕತಾರ್, ಥಾಯ್ಲೆಂಡ್, ಸಿಂಗಪುರಕ್ಕೆ ಪ್ರಮುಖವಾಗಿ ರಫ್ತಾಗುತ್ತಿವೆ. ಸಿರಿಧಾನ್ಯಗಳನ್ನು ರಫ್ತು ಮಾಡಲು ಮುಂದಾಗುವವರಿಗೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ (ಕೆಪೆಕ್)ದಿಂದ ನೆರವು ನೀಡಲಾಗುವುದು. ರಫ್ತು ಪ್ರಕ್ರಿಯೆಯ ನಿಯಮ-ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.
ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ ಆಯೋಜನೆ ಮೂಲಕ ಸಿರಿಧಾನ್ಯಗಳ ರಫ್ತು ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.