ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಮಳೆ ದಾಖಲಾಗಿದ್ದು, ಮಧ್ಯಾಹ್ನವೇ ನಗರದ ವಿವಿಧ ಕಡೆಗಳಲ್ಲಿ ತೆಂಪರೆದಿದ್ದಾನೆ. ಕೆಂಗೇರಿ ಒಂದರಲ್ಲಿಯೇ 17 ಮಿಲಿ ಮೀಟರ್ ಮಳೆ ದಾಖಲಾಗಿದೆ.
ನಗರದಲ್ಲಿ ಕೆಲವು ದಿನಗಳಿಂದ ಹಿಂಗಾರು ಮಳೆ ದುರ್ಬಲವಾಗಿದ್ದರಿಂದ ಆಗಾಗ ಚುರುಕು ಬಿಸಿಲು ದಾಖಲಾಗುತ್ತಿತ್ತು. ಇದನ್ನು ಹೊರತುಪಡಿಸಿದರೆ, ಅಷ್ಟಾಗಿ ಚಳಿಯಾಗಲಿ, ಅತ್ಯಧಿಕ ತಾಪಮಾನದ ವಾತಾವರಣ ಕಂಡು ಬಂದಿಲ್ಲ. ಬದಲಾದ ವಾತಾವರಣದಲ್ಲಿ ವಿದ್ಯಮಾನಗಳಿಂದ ಬುಧವಾರ ನಗರದಲ್ಲಿ ಒಂದೆರಡು ಕಡೆ ಜೋರು ಮಳೆ ಆಗಿದೆ.
ಮಧ್ಯಾಹ್ನ ದಿಢೀರ್ ಮಬ್ಬು ವಾತಾವರಣ ಶುರುವಾಗಿ, 4 ಗಂಟೆ ಹೊತ್ತಿಗೆ ಜಿಟಿ ಜಿಟಿ ಮಳೆ ಆರಂಭವಾಯಿತು. ಜಯನಗರ, ಕೆಆರ್.ಪುರ, ವೈಟ್ ಫೀಲ್ಡ್, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್, ಶಿವಾಜಿನಗರ, ಅಂಜನಾಪುರ, ವಸಂತ ನಗರ, ಪೀಣ್ಯ, ಸಿವಿ ರಾಮನ್ ನಗರ, ಬಸವನಗುಡಿ, ಕೊತ್ನೂರು, ಮಾರತ್ತಹಳ್ಳಿ, ಹೂಡಿ, ಮಹದೇವಪುರ, ಕೋರಮಂಗಲ, ಹೂಡಿ, ಮಹದೇವಪುರ, ವರ್ತೂರು, ಕಲ್ಯಾಣ ನಗರ, ಬನಶಂಕರಿ, ಕುಮಾರ ಸ್ವಾಮಿ ಬಡಾವಣೆ, ಬಿಇಎಲ್, ಉತ್ತರಹಳ್ಳಿ, ಕೆಂಗೇರಿ, ನಾಗರಭಾವಿ, ವಿಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಬಿದ್ದಿದೆ.
ಇಂದು ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?
ಸಂಜೆ 6 ಗಂಟೆವರೆಗೆ ಕೆಂಗೇರಿಯಲ್ಲಿ ಅಧಿಕ 17 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಹೊರಮಾವು 15.5 ಮಿ.ಮೀ, ಸಿಂಗಸಂದ್ರ 15ಮಿ.ಮೀ, ರಾಜರಾಜೇಶ್ವರಿ ನಗರ (1) 13ಮಿ.ಮೀ, ಕೆಂಗೇರಿ (2) 12.5 ಮಿ.ಮೀ, ಬೊಮ್ಮನಹಳ್ಳಿ ಯಲ್ಲಿ 10ಮಿ.ಮೀ. ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)
ಮಳೆ ವರದಿ ಮಾಹಿತಿ ನೀಡಿದೆ.
ನಗರದಲ್ಲಿ ಅಲ್ಲಲ್ಲಿ ಜೋರು ಮಳೆ ಬಂದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತದ್ದು ಕಂಡು ಬಂತು. ಜಿಟಿ ಜಿಟಿ ಮಳೆಯಿಂದಾಗಿ ರಸ್ತೆಯಲ್ಲಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಕಿರಿ ಕಿರಿ ಉಂಟಾಯಿತು.