ಬಾಲಿವುಡ್ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ತಾಪ್ಸಿ ಮದುವೆ ನಡೆದಿತ್ತು. ಹೀಗಾಗಿ ಸಾಕಷ್ಟು ಜನರಿಗೆ ಆಕೆಯ ಮದುವೆಯ ಸುಳಿವೇ ಸಿಕ್ಕಿರಲಿಲ್ಲ. ಬ್ಲರ್ ಆಗಿರುವ ವಿಡಿಯೋವೊಂದು ಲೀಕ್ ಆಗಿ ಮದುವೆ ವಿಷಯ ತಿಳಿದಿತ್ತು.
ತಾಪ್ಸಿ ಉದಯ್ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಅವರು ನೀಡಿರಲಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ಸದ್ದು ಮಾಡಿತ್ತು. ಹಾಗಾಗಿ ಮದುವೆ ಫೋಟೋ ಮತ್ತು ವಿಡಿಯೋಗಾಗಿ ಅಭಿಮಾನಿಗಳು ಕಾಯುತ್ತಿದ್ದರು.
ಆದರೆ ಅಭಿಮಾನಿಗಳ ಆಸೆಗೆ ನಟಿ ತಣ್ಣಿರೆರಚ್ಚಿದ್ದಾರೆ. ಈ ಬಗ್ಗೆ ತಾಪ್ಸಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ನನಗೆ ಫೋಟೋ ಮತ್ತು ವಿಡಿಯೋವನ್ನು ಮುಚ್ಚಿಡುವಂತಹ ಉದ್ದೇಶವಿರಲಿಲ್ಲ. ಆದರೆ ಅದು ನನ್ನ ಖಾಸಗಿ ಕಾರ್ಯಕ್ರಮ. ಹಾಗಾಗಿ ಅದನ್ನು ಹಂಚಿಕೊಳ್ಳಲ್ಲ ಎಂದಿದ್ದಾರೆ.
ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನಡೆದಿದೆ.